ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಸಮಯದಲ್ಲಿ ಹೂವಿಲ್ಲದೆ ಹೂವಿಗಾಗಿ ಗಣ್ಯರ ಪರದಾಟ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನೂತನ ತಾಲೂಕು ಕೇಂದ್ರವಾಗಿರುವ ಸಾಲಿಗ್ರಾಮದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಅಸಮಾಧಾನ, ಬೇಸರ, ಗೊಂದಲಗಳ ನಡುವೆ ನಿರುತ್ಸಾಹದಿಂದ ನಡೆದಿದ್ದು ಕಂಡುಬಂದಿತು.
ಕಾರ್ಯಕ್ರಮದ ಆರಂಭದಲ್ಲೇ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಸಮಯದಲ್ಲಿ ಹೂವಿಲ್ಲದೆ ಹೂವಿಗಾಗಿ ಗಣ್ಯರು ಪರದಾಡಿದ ಪ್ರಸಂಗ ನಡೆಯಿತು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು, ರೈತ ಮತ್ತು ದಲಿತ ಸಂಘಟನೆಯವರು, ಜನಪ್ರತಿನಿಧಿಗಳು ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು ಕೂಡ ತಾಲೂಕು ಆಡಳಿತ ಅವರುಗಳಿಗೆ ವೇದಿಕೆ ಮೇಲೆ ಆಸನಗಳನ್ನು ವ್ಯವಸ್ಥೆ ಮಾಡಿಕೊಡದಿದ್ದರೂ ಕನಿಷ್ಠ ಅವರುಗಳಿಗೆ ಗೌರವ ತೋರಿಸದ ಹಿನ್ನೆಲೆಯಲ್ಲಿ ಅವರುಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ ಕಾರ್ಯಕ್ರಮದಿಂದ ಹೊರ ನಡೆದ ಘಟನೆಯು ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಸಮಾಧಾನಿತರು ಸಾಲಿಗ್ರಾಮ ತಾಲೂಕು ಆಡಳಿತ ಆಯೋಜಿಸುವ ಯಾವುದೇ ಜಯಂತಿ ಅಥವಾ ರಾಷ್ಟ್ರೀಯ ಹಬ್ಬಗಳಾಗಲಿ ಅವುಗಳಿಗೆ ಒಂದೊಂದು ಕಾರ್ಯಕ್ರಮಗಳಿಗೆ ತಮ್ಮದೇ ಆದ ಒಂದೊಂದು ನಿಯಮಗಳನ್ನು ಅಳವಡಿಸಿಕೊಂಡು ಮಾಡುವ ಮೂಲಕ ಈ ಭಾಗದ ಜನಪ್ರತಿನಿಧಿಗಳು, ಸಂಘಟನೆಗಳವರಿಗೆ, ಮುಖಂಡರುಗಳಿಗೆ ಅಪಮಾನ ಮಾಡುತ್ತಿದ್ದಾರೆಂದು ತೀವ್ರ ಬೇಸರ ವ್ಯಕ್ತಪಡಿಸಿದ ಅವರು ಶಾಸಕರು ಹಾಗೂ ಜಿಲ್ಲಾಡಳಿತ ಇಂತಹ ಘಟನೆಗಳಿಗೆ ಕಾರಣರಾಗುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಸಿಲಿನಲ್ಲಿ ಮಕ್ಕಳು: ತಾಲೂಕು ಆಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಕುಳಿತುಕೊಳ್ಳುವ ವೇದಿಕೆಗೆ ನೆರಳಿನ ವ್ಯವಸ್ಥೆಯನ್ನು ಮಾಡಿ ಮಕ್ಕಳಿಗೆ ಬಿಸಿಲಿನ ವರವನ್ನು ಕಲ್ಪಿಸಿದ ತಾಲೂಕು ಆಡಳಿತದ ವಿರುದ್ಧ ಸಾರ್ವಜನಿಕರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ ಘಟನೆಯು ಜರುಗಿತು. ಈ ಬಿಸಿಲಿನಲ್ಲಿಯೇ ಪುಟಾಣಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ದೇಶಪ್ರೇಮ ಮೆರೆದರು.

ಈ ಶಾಲಾ ಆವರಣದಲ್ಲಿಯೇ ಲಕ್ಷಾಂತರ ರೂಗಳನ್ನು ವ್ಯಯ ಮಾಡಿ ಶಾಲಾ ಕಾಲೇಜುಗಳ ಕಾರ್ಯಕ್ರಮ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇತರ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಎರಡು ವೇದಿಕೆಗಳನ್ನು ನಿರ್ಮಿಸಲಾಗಿದೆ. ಆದರೂ ಅವುಗಳನ್ನು ಬಳಸದ ಕಾರಣ ವಿದ್ಯಾರ್ಥಿಗಳು ಬಿಸಿಲಿನ ನಡುವೆ ನೆಲದ ಮೇಲೆ ತಮ್ಮ ನೃತ್ಯವನ್ನು ಮಾಡಿದರೆ ಗಣ್ಯರು ವೇದಿಕೆ ಮೇಲೆ ಆಸೀನರಾಗಿದ್ದನ್ನು ಕಂಡ ಸಾರ್ವಜನಿಕರು ಕಾರ್ಯಕ್ರಮವನ್ನು ಮಾಡುವುದಾದರೆ ವ್ಯವಸ್ಥಿತವಾಗಿ ಮಾಡಲಿ ಇಲ್ಲದಿದ್ದರೆ ಕಾಟಾಚಾರಕ್ಕೆ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.

ಕೊಳಚೆಯಿಂದ ಕೂಡಿದ್ದ ಶಾಲಾ ಆವರಣ: ತಾಲೂಕು ಆಡಳಿತವು 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದ ಶಾಲಾ ಆವರಣವು ಕೊಳಚೆ ನೀರಿನಿಂದ ಕೂಡಿದ್ದು, ಇದರ ನಡುವೆ ಮಕ್ಕಳು ಓಡಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ಕಂಡ ಪೋಷಕರು ಕಾರ್ಯಕ್ರಮ ನಡೆಯುವ ಶಾಲೆಯ ಆವರಣವನ್ನಾದರೂ ತಾಲೂಕು ಆಡಳಿತ ಸ್ವಚ್ಛಗೊಳಿಸದೆ ಅದರೊಳಗಡೆ ಕಾರ್ಯಕ್ರಮವನ್ನು ಮಾಡುವ ಮೂಲಕ ತಾಲೂಕು ಆಡಳಿತ ನಿರ್ಲಕ್ಷ ವಹಿಸಿದೆ, ಇದರಿಂದ ನಮ್ಮ ಮಕ್ಕಳಿಗೆ ಯಾವುದಾದರೂ ರೋಗ ರುಜಿನಗಳು ಬಂದರೆ ಅದಕ್ಕೆ ಯಾರು ಜವಾಬ್ದಾರರು ಎಂದು ಮಕ್ಕಳ ಪೋಷಕರುಗಳು ತಮ್ಮ ಅಳಲನ್ನು ತೋಡಿಕೊಂಡರು.
ಸಮಾರಂಭದಲ್ಲಿ ನಾಲ್ಕು ವಿದ್ಯಾರ್ಥಿಗಳು ಹಾಗೂ ಒಬ್ಬ ರೈತ ಮಹಿಳೆಯನ್ನು ಸನ್ಮಾನಿಸಲಾಯಿತು.
ಧ್ವಜಾರೋಹಣವನ್ನು ತಹಶೀಲ್ದಾರ್ ನರಗುಂದ ನೆರವೇರಿಸಿದರು. ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಫಾತಿಮಾ ಉನ್ನಿಸಾ, ಉಪಾಧ್ಯಕ್ಷೆ ಶಶಿಕಲಾ, ಸಿಡಿಸಿ ಉಪಾಧ್ಯಕ್ಷ ಪರೀಕ್ಷಿತ್, ಎಸ್ ಡಿ ಎಂ ಸಿ ಅಧ್ಯಕ್ಷ ಮುಸ್ತಪ, ಪ್ರಾಂಶುಪಾಲ ಅಶೋಕ್, ಪಿಡಿಓ ತಿಲಕ್ ರಾಜ್, ವಿದ್ಯಾರ್ಥಿಗಳು, ಪೋಷಕರುಗಳು ಇದ್ದರು.