ಶ್ರೀರಂಗಪಟ್ಟಣ: ಮುಸ್ಲಿಂ ಮಹಿಳೆಯರ ಪರ ಅವಹೇಳನಕಾರಿಯಾಗಿ ಮಾತನಾಡಿದ ಪ್ರಕರಣದ ಆರೋಪಿ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪರ ವಕಾಲತ್ತು ವಹಿಸಿರುವ ವಕೀಲ ಡಿ. ಚಂದ್ರೇಗೌಡ ಅವರನ್ನು ಶ್ರೀರಂಗಪಟ್ಟಣ ತಾಲೂಕು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ.
ಈ ಬಗ್ಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿ.ಡಿ ಗಂಗಾಧರ್ ಅವರು ನಾನುಗೌರಿ.ಕಾಂಗೆ ಖಚಿತಪಡಿಸಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಪರ ವಕಾಲತ್ತು ವಹಿಸಿದ ಕಾರಣಕ್ಕೆ ಉಚ್ಚಾಟನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಮುಸ್ಲಿಂ ಮಹಿಳೆಯರ ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಚಂದ್ರೇಗೌಡ ಜಾಮೀನು ಕೊಡಿಸಿದ್ದಾರೆ. ಇದು ಪಕ್ಷದ ಕಾನೂನು ಘಟಕದ ನಿಯಮಗಳಿಗೆ ವಿರುದ್ದವಾಗಿದೆ. ಈ ಕಾರಣಕ್ಕೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಕಾನೂನು ಘಟಕದ ಮಂಡ್ಯ ಜಿಲ್ಲಾಧ್ಯಕ್ಷ ಎ.ಎಸ್ ಗೌರಿ ಶಂಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯರಿಬ್ಬರ ಶ್ಯೂರಿಟಿ, ೨ ಲಕ್ಷ ರೂ. ಮೌಲ್ಯದ ಬಾಂಡ್ ಆಧಾರದ ಮೇಲೆ ಜನವರಿ ೧೭ರಂದು ನ್ಯಾಯಾಲಯ ಕಲ್ಲಡ್ಕ ಭಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರ ಪರವಾಗಿ ಹಿರಿಯ ವಕೀಲರಾದ ಎಸ್ ಬಾಲನ್ ವಾದ ಮಂಡಿಸಿದ್ದರು. ಜನವರಿ ೧೦ರಂದು ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆದೇಶವನ್ನು ಜ.೧೭ಕ್ಕೆ ಕಾಯ್ದಿರಿಸಿತ್ತು.