ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ಸಿಎಂ ಸಿದ್ದರಾಮಯ್ಯ ಪವರ್ ಫುಲ್ ಸಂದೇಶ ಕಳುಹಿಸಿ ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ನಾನೇ ಈ ಬಾರಿ ಬಜೆಟ್ ಮಂಡನೆ ಮಾಡುತ್ತೇನೆ. ಬಜೆಟ್ ಸಿದ್ದತೆ ಈ ತಿಂಗಳಿನಿಂದ ಶುರು ಮಾಡುವುದಾಗಿ ಹೇಳಿದ್ದಾರೆ.
ಇಂದು ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರಿಗಳು ಸಮ್ಮೇಳನ ಸಭಾಂಗಣದಲ್ಲಿ ಭೇಟಿಯಾಗಿ ಹೊಸ ವರ್ಷದ ಶುಭಾಶಯ ಕೋರಿದರು.ಸರ್ಕಾರದ ಅಪರ ಕಾರ್ಯದರ್ಶಿಗಳು, ಕಾರ್ಯದರ್ಶಿ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಜಿಪಿಸಿಸಿಎಫ್ ಹಾಗೂ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಿಎಂ ಭೇಟಿಯಾಗಿ ಶುಭ ಹಾರೈಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ನಾಡಿನ ಜನರಿಗೆ ಹೊಸ ವರ್ಷದ ಶುಭಾಶಯಗಳು, ಬಾಳಲ್ಲಿ ಹರ್ಷವನ್ನು ಉಂಟು ಮಾಡಲಿ ಎಂದು ಹೇಳಿದರು.
ಮಾಧ್ಯಮಗಳು ಈ ಸಂದರ್ಭದಲ್ಲಿ ಬಜೆಟ್ ಸಿದ್ದತೆ ಯಾವಾಗ ಪ್ರಾರಂಭ ಆಗಲಿದೆ ಎಂದು ಕೇಳಿದ್ದಕ್ಕೆ, ಈ ತಿಂಗಳಿನಿಂದ ಬಜೆಟ್ ಸಿದ್ದತೆ ಶುರು ಮಾಡುತ್ತೇನೆ ಎಂದು ಉತ್ತರಿಸಿದರು.
ಸಿಎಂ ಈ ಹೇಳಿಕೆ ನೀಡುವ ಮೂಲಕ ಬಜೆಟ್ ಮುಗಿಯೋವರೆಗೂ ಕುರ್ಚಿ ಬದಲಾವಣೆ ಚರ್ಚೆ ಇಲ್ಲ ಎಂಬ ಸಂದೇಶವನ್ನು ಕಳುಹಿಸಿದ್ದಾರೆ. ಸಾಧಾರಣವಾಗಿ ಫೆಬ್ರವರಿ ಕೊನೆಯ ವಾರ ಮಾರ್ಚ್ ಮೊದಲ ವಾರದಲ್ಲಿ ಕರ್ನಾಟಕ ಬಜೆಟ್ ಮಂಡನೆಯಾಗುತ್ತದೆ. ಸಿದ್ದರಾಮಯ್ಯನವರೇ ಹಣಕಾಸು ಮಂತ್ರಿಯಾಗಿರುವ ಕಾರಣ ಅವರೇ ಮಂಡಿಸುತ್ತಾರೆ.



