ಬೆಂಗಳೂರು: ಗ್ರಾಮಾಂತರ ಜಿಲ್ಲೆ ನೆಲಮಂಗಲದ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಮಂಗಳವಾರ ೫ ತಿಂಗಳ ಹೆಣ್ಣು ಭ್ರೂಣ ಪತ್ತೆಯಾಗಿತ್ತು. ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರು ಭ್ರೂಣದ ತಾಯಿಯನ್ನು ಪತ್ತೆ ಮಾಡಿದ್ದಾರೆ.
೫ ತಿಂಗಳ ಭ್ರೂಣದ ತಾಯಿ ೧೮ ವರ್ಷದ ಯುವತಿಯಾಗಿದ್ದು, ಈಕೆ ಮೂಲತಃ ಕಲಬುರಗಿಯವರು ಎಂದು ತಿಳಿದುಬಂದಿದೆ. ಯುವತಿ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಳು. ನಾಲ್ಕು ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ನೆಲಮಂಗಲಕ್ಕೆ ಬಂದಿದ್ದ ಆಕೆ, ಬೇಗೂರಿನಲ್ಲಿ ತನ್ನ ತಾಯಿಯೊಂದಿಗೆ ನೆಲೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಮದುವೆಗೂ ಮುನ್ನ ಗರ್ಭ ಧರಿಸಿದ್ದಳು. ಹೀಗಾಗಿ, ಮಗುವನ್ನು ತೆಗೆಸಲು ಯುವತಿ ಗರ್ಭನಿರೋಧಕ ಮಾತ್ರೆ ಸೇವಿಸಿ ಹೊಟ್ಟೆ ನೋವಿನಿಂದ ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ, ಶೌಚಾಲಯಕ್ಕೆ ಹೋದಾಗ ಯುವತಿಗೆ ಗರ್ಭಪಾತವಾಗಿದೆ ಎಂದು ವರದಿಯಾಗಿದೆ. ಬಳಿಕ ಯುವತಿ ಹೆಣ್ಣು ಭ್ರೂಣವನ್ನು ಶೌಚಾಲಯದಲ್ಲಿ ಹಾಕಿ ಆಸ್ಪತ್ರೆಯಿಂದ ಹೊರಟು ಹೋಗಿದ್ದಾಳೆ. ಆಸ್ಪತ್ರೆ ಸಿಬ್ಬಂದಿ ಶೌಚಾಲಯಕ್ಕೆ ತೆರಳಿದಾಗ ಭ್ರೂಣ ಪತ್ತೆಯಾಗಿದ್ದು, ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಆಸ್ಪತ್ರೆಗೆ ಬಂದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ, ಸಿಸಿಟಿವಿ ಕ್ಯಾಮೆರಾ ಆಧರಿಸಿ ಯುವತಿಯನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಯುವತಿಗೆ ಬಾಣಾಂತಿ ಆರೈಕೆ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.