ಬೆಂಗಳೂರು: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ವಹಣೆ ಮಾಡುವಲ್ಲಿ ಈ ಕೊಲೆಗಡುಕ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಬಳ್ಳಾರಿಯಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ಈಗ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ 322 ನವಜಾತ ಶಿಶುಗಳು ಹಾಗೂ 29 ಬಾಣಂತಿಯರು ಮೃತಪಟ್ಟಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ವಹಣೆ ಮಾಡುವಲ್ಲಿ ಈ ಕೊಲೆಗಡುಕ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇದರ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೂ ಸೇರಿ ಕಳೆದ ಆರು ತಿಂಗಳ ಅವಧಿ (ಏಪ್ರಿಲ್–ಅಕ್ಟೋಬರ್)ಯಲ್ಲಿ 29 ಬಾಣಂತಿಯರು ಹಾಗೂ 322 ನವಜಾತ ಶಿಶುಗಳ ಸಾವು ವರದಿಯಾಗಿದೆ. ಇದರಲ್ಲಿ 111ಕ್ಕೂ ಹೆಚ್ಚು ಶಿಶುಗಳು ಜಿಲ್ಲಾಸ್ಪತ್ರೆಯಲ್ಲೇ ಸಾವನ್ನಪ್ಪಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರಪ್ಪ ಗಡೇದ, ‘ಅಪೌಷ್ಟಿಕತೆ, ನ್ಯುಮೋನಿಯಾ, ಕಡಿಮೆ ತೂಕ, ಅವಧಿಪೂರ್ವ ಹೆರಿಗೆ ಸೇರಿದಂತೆ ವಿವಿಧ ಕಾರಣಗಳಿಂದ ಈ ಸಾವುಗಳು ಸಂಭವಿಸಿವೆ. ನಿರ್ಲಕ್ಷ್ಯ ಅಥವಾ ಯಾವುದೇ ಔಷಧಿಯ ಅಡ್ಡಪರಿಣಾಮದಿಂದ ಅಲ್ಲ. ಜನ ಆತಂಕ ಪಡಬಾರದು’ ಎಂದಿದ್ದಾರೆ.
‘ಜಿಲ್ಲೆಯಲ್ಲಿ ಆರು ತಿಂಗಳ ಅವಧಿಯಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿದ್ದು ನಿಜ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮರಣ ಪ್ರಮಾಣ ಕಡಿಮೆಯಾಗಿದೆ’ ಎಂದು ಜಿಲ್ಲಾ ಅಧೀಕ್ಷಕ ಡಾ.ವಿಠ್ಠಲ ಶಿಂಧೆ ಪ್ರತಿಕ್ರಿಯಿಸಿದ್ದಾರೆ.