ಮೈಸೂರು : ಜನವರಿ ೧೯ ರಂದು ನಡೆದ ನಗರದ ಗಾಂಧಿ ಚೌಕದಲ್ಲಿರುವ ದಿ ಮೈಸೂರು ಕೋ-ಆಪರೇಟೀವ್ ಬ್ಯಾಂಕಿನ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದ್ದು, ಫಲಿತಾಂಶ ಪ್ರಕಟಣೆಯಲ್ಲೂ ಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವ ಕಾರಣ ಚುನಾವಣೆ ರದ್ದು ಗೊಳಿಸುವಂತೆ ಬ್ಯಾಂಕಿನ ಸದಸ್ಯರಾದ ಈಶ್ವರ ಮತ್ತು ಎ.ಮೋಹನ ಎಂಬವರು ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಿದ್ದಾರೆ.
ಬ್ಯಾಂಕಿನ ಚುನಾವಣೆಯಲ್ಲಿ ಮತ ಚಲಾಯಿಸಲು ಅನರ್ಹರಾದ ಸಂಘದ ಕೆಲವು ಸದಸ್ಯರುಗಳು ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡುವಂತೆ ಕೋರಿ ಉಚ್ಛ ನ್ಯಾಯಾಲಯಕ್ಕೆ ರಿಟ್ ಅರ್ಜಿ ದಾಖಲಿಸಿದ್ದು, ನ್ಯಾಯಾಲಯ ಜ.೧೬ ರಂದು ತೀರ್ಪು ನೀಡಿ, ರಿಟ್ ಅರ್ಜಿದಾರರಿಗೆ ಜ.೧೯ ರಂದು ನಡೆದ ಬ್ಯಾಂಕಿನ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಿತ್ತು, ಆದರೇ, ರಿಟ್ ಅರ್ಜಿದಾರರು ಚಲಾಯಿಸುವ ಮತಗಳನ್ನು ಪ್ರತ್ಯೇಕವಾದ ಪೆಟ್ಟಿಗೆಯಲ್ಲಿ ಇಡಬೇಕೆಂದು ಆದೇಶಿಸಿತ್ತು. ಆದರೇ, ಚುನಾವಣಾಧಿಕಾರಿ ರಾಜು ಅವರು ಮತಗಳ ಎಣಿಕೆ ಸಂದರ್ಭದಲ್ಲಿ ರಿಟ್ ಅರ್ಜಿದಾರರು ಚಲಾಯಿಸಿದ ಪ್ರತ್ಯೇಕ ಮತಗಳನ್ನೂ ಸಹ ಏಣಿಕೆ ಮಾಡಿ ಫಲಿತಾಂಶ ಪ್ರಕಟಿಸಿದ್ದು ಕಾನೂನು ಬಾಹಿರ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ದೂರುದಾರರು ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕರಣದ ಸಂಬಂಧ ಜ.೨೭ ರಂದು ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನಲ್ಲಿ, ಜ.೧೯ ರಂದು ನಡೆದಿರುವ ಬ್ಯಾಂಕಿನ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸುವಂತೆ ಹೇಳಿದ್ದು, ನ್ಯಾಯಾಲಯದ ಆದೇಶದ ರೀತ್ಯಾ ರಿಟ್ ಅರ್ಜಿದಾರರು ಚಲಾಯಿಸಿರುವಮತಗಳನ್ನೂ ಸೇರಿಸಿಕೊಂಡು ಏಣಿಕೆ ಮಾಡಿ ಫಲಿತಾಂಶ ಪ್ರಕಟಿಸಿ ಎಂದು ಹೇಳಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಚುನಾವಣಾ ಅಕ್ರಮದಲ್ಲಿ ಬ್ಯಾಂಕಿನ ಹಾಲಿ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚುನಾವಣಾ ಅಧಿಕಾರಿ ಸಹ ಭಾಗಿಯಾಗಿದ್ದಾರೆ.
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸದಸ್ಯರಿಗೆ ಅನೇಕ ರೀತಿಯ ಅಮಿಷಗಳನ್ನು ಒಡ್ಡಿ ಉಡುಗೋರೆಗಳನ್ನೂ ಸಹ ನೀಡಲಾಗಿದೆ. ಇದು ಕಾನೂನು ಬಾಹಿರ ಮತ್ತು ಚುನಾವಣಾ ಅಕ್ರಮವಾಗಿದ್ದು, ಅಭ್ಯರ್ಥಿಗಳು ಸದಸ್ಯರಿಗೆ ಅಮಿಷ ಒಡ್ಡಿ ಉಡುಗೋರೆ ನೀಡುತ್ತಿರುವ ವೀಡಿಯೋ ಕೂಡ ಲಭ್ಯವಿದ್ದು, ಅದನ್ನೂ ಸಹ ಸಹಕಾರ ಸಂಘಗಳ ನಿಬಂಧಕರಿಗೆ ನೀಡಲಾಗಿದೆ.