ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಮ್ಮ ಜೀವಿತಾವಧಿಯಲ್ಲಿ ದೇಶದ ಏಳಿಗೆಗೆ ಅಪಾರವಾದ ಕೊಡುಗೆ ನೀಡಿ ಆಹಾರ ಕ್ರಾಂತಿಗೆ ಮುನ್ನುಡಿ ಬರೆದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬುಜಗಜೀವನ ರಾಂ ಅವರ ಹೆಸರು ಅಜರಾಮರ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಪುರಸಭೆಯ ಆವರಣದಲ್ಲಿ ನಡೆದ ಡಾ.ಬಾಬು ಜಗಜೀವನ ರಾಂ ಅವರ 118 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹನೀಯರ ತತ್ವ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಕೇಂದ್ರ ಸಚಿವರಾಗಿ ತಾವು ನಿರ್ವಹಿಸಿದ ಖಾತೆಗಳಿಗೆ ನ್ಯಾಯ ದೊರಕಿಸಿ ಉತ್ತಮವಾಗಿ ಕೆಲಸ ಮಾಡಿದ ಅವರು ದೇಶವೆ ನಿಬ್ಬೆರಗಾಗುವ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಏ, 25 ರಂದು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಂ ಅವರ ಜಯಂತಿ ಕಾರ್ಯಕ್ರಮವನ್ನು ಸಾಲಿಗ್ರಾಮ ಹಾಗೂ ಕೆ.ಆರ್.ನಗರ ಎರಡು ತಾಲೂಕಿನ ಎಲ್ಲಾ ಸಮಾಜದ ಬಾಂದವರ ಸಮ್ಮುಖದಲ್ಲಿ ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲು ನಿರ್ಧಾರ ಮಾಡಿದ್ದು ಈ ವಿಚಾರದಲ್ಲಿ ಕೆಲವರ ನಡುವೆ ಬಿನ್ನಾಭಿಪ್ರಾಯ ಇರುವುದು ನನ್ನ ಗಮನಕ್ಕೆ ಬಂದಿದ್ದು ಕೂಡಲೇ ಎರಡು ತಾಲೂಕಿನ ತಹಸೀಲ್ದಾರರುಗಳು ಸಮಾಜದ ಪ್ರಮುಖರ ಸಭೆ ನಡೆಸಿ ಗೊಂದಲ ಪರಿಹರಿಸಿ ಸುಸೂತ್ರವಾಗಿ ಜಯಂತಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಮುಂದಿನ ವರ್ಷ ಡಾ.ಬಾಬು ಜಗಜೀವನ ರಾಂ ಅವರ ಜಯಂತಿ ಕಾರ್ಯಕ್ರಮ ನಡೆಯು ವೇಳೆಗೆ ಅವರ 6.5 ಅಡಿ ಎತ್ತರದ ಕಂಚಿನ ಪ್ರತಿಮೆ ಮಾಡಿಸುವುದರ ಜತೆಗೆ ನಿರ್ಮಾಣ ಹಂತದಲ್ಲಿರುವ ಜಗಜೀವನ ರಾಂ ಭವನವನ್ನು ಪೂರ್ಣಗೊಳಿಸಿ ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಿಸುವುದಾಗಿ ಘೋಷಿಸಿದರು.
ನಿವೃತ್ತ ಉಪನ್ಯಾಸಕ ಡಾ. ಕೃಷ್ಣ ಪ್ರಗತಿ ಪರ ಚಿಂತಕ ವಿ.ಸುರೇಶ್ ಮದುವನ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ದಲಿತ ಮುಖಂಡ ಹನಸೋಗೆನಾಗರಾಜು ಮಾತನಾಡಿ ಡಾ.ಬಾಬು ಜಗಜೀವನ ರಾಂ ಅವರ ಜೀವನ ಮತ್ತು ಸಾಧನೆಯ ಬಗ್ಗೆ ತಿಳಿಸಿದರು.
ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ಮಿಕ್ಸರ್ ಶಂಕರ್, ಕೋಳಿಪ್ರಕಾಶ್, ಶಂಕರ್ ಸ್ವಾಮಿ, ಮಾಜಿ ಅಧ್ಯಕ್ಷರಾದ ಡಿ.ಕಾಂತರಾಜು, ಗೀತಾಮಹೇಶ್, ನರಸಿಂಹರಾಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ರಾಜ್ಯ ರೈತ ಪರ್ವ ಸಂಘದ ಎಂ.ಜೆ.ಕುಮಾರ್, ತಾಲೂಕು ಆದಿ ಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ಎಸ್.ರವಿಕುಮಾರ್, ತಾ.ಪಂ.ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್, ಮುಖಂಡರಾದ ಹನಸೋಗೆನಾಗರಾಜು, ಹೆಚ್.ಎಸ್.ವೇಣುಗೋಪಾಲ್, ತಿಮ್ಮಶೆಟ್ಟಿ, ನಂದೀಶ್, ತಹಸೀಲ್ದಾರ್ ಜೆ.ಸುರೇಂದ್ರಮೂರ್ತಿ, ಇಒ ವಿ.ಪಿ.ಕುಲದೀಪ್, ಬಿಇಒ ಆರ್ ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ನಿರ್ದೇಶಕ ಶಂಕರಮೂರ್ತಿ ಮತ್ತಿತರರು ಇದ್ದರು.