Saturday, February 21, 2026
Google search engine

Homeರಾಜ್ಯಸರ್ವರ ಒಳಿತಿಗಾಗಿ ಶ್ರಮಿಸಿದ ಸರ್ವಜ್ಞ ನಮ್ಮೆಲ್ಲರಿಗೂ ಆದರ್ಶ‌ : ಸಚಿವ ರಹೀಂ ಖಾನ್

ಸರ್ವರ ಒಳಿತಿಗಾಗಿ ಶ್ರಮಿಸಿದ ಸರ್ವಜ್ಞ ನಮ್ಮೆಲ್ಲರಿಗೂ ಆದರ್ಶ‌ : ಸಚಿವ ರಹೀಂ ಖಾನ್

ಬೀದರ್ : ಸಮಾಜದಲ್ಲಿ ಜಾತಿ, ವರ್ಗ, ವರ್ಣ ಭೇದ ಎನ್ನದೇ ಸರ್ವರ ಒಳಿತಿಗಾಗಿ ಶ್ರಮಿಸಿದ ಸರ್ವಜ್ಞ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಆಯೋಜಿಸಿದ ಸಂತ ಕವಿ ಸರ್ವಜ್ಞ ಅವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂದಿಗೂ ಬೇರೂರಿರುವ ಜಾತಿ-ಧರ್ಮ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ತಾರತಮ್ಯ ಹೋಗಲಾಡಿಸಲು ಸರ್ವಜ್ಞ ಸೇರಿದಂತೆ ಅನೇಕ ಮಹಾತ್ಮರ ಮಾನವೀಯ ಮೌಲ್ಯಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಳಿಕ ಯುವ ಸಾಹಿತಿ ಈಶ್ವರ ರುಮ್ಮಾ ಮಾತನಾಡಿ, ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಸರ್ವಜ್ಞರ ತ್ರಿಪದಿಗಳು ಆದರ್ಶವಾಗಿದ್ದು, ಸರ್ವಜ್ಞ ಲಕ್ಷಾಂತರ ತ್ರಿಪದಿಗಳ ಮೂಲಕ ಸಮಾಜದ ಎಲ್ಲ ಕ್ಷೇತ್ರಗಳ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದರು. ಸಮಾಜದಲ್ಲಿನ ಮೌಢ್ಯ, ಕಂದಾಚಾರ ಸೇರಿದಂತೆ ಅನಿಷ್ಟ ಪದ್ಧತಿಗಳನ್ನು ಸರ್ವಜ್ಞ ಕಠೋರವಾಗಿ ಟೀಕಿಸಿದರು.

ಸ್ತ್ರೀ ಸಮಾನತೆಯ ಚಿಂತನೆಗಳನ್ನು ತ್ರಿಪದಿಗಳಲ್ಲಿ ಕಾಣಬಹುದು. ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಯುವ ಸಮುದಾಯ ಸರ್ವಜ್ಞರ ತ್ರಿಪದಿಗಳ ಮೈಗೂಡಿಸಿಕೊಳ್ಳಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿಯಾದರೆ ನಾವು ಮಹಾತ್ಮರಿಗೆ ನೀಡುವ ಗೌರವವಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುಂಚಿತವಾಗಿ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂತಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರು ಪೂಜೆ ಸಲ್ಲಿಸಿದರು. ಬಳಿಕ ಸಂತಕವಿ ಸರ್ವಜ್ಞರ ಭಾವಚಿತ್ರ ಮೆರವಣಿಗೆ ನಗರದ ಶಿವಾಜಿ ವೃತ್ತದಿಂದ ಚಾಲನೆಗೊಂಡು ಭಗತ್ ಸಿಂಗ್ ವೃತ್ತ, ಬಸವವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ ಮಾರ್ಗವಾಗಿ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರಕ್ಕೆ ತಲುಪಿತು.

ಈ ಸಂದರ್ಭದಲ್ಲಿ ಬೀದರ್ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಬಿ.ಕರಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಜಿಲ್ಲಾ ಕುಂಬಾರ ಸಮಾಜದ ಮುಖಂಡ ವಿಠಲ ಕುಂಬಾರ ಸೇರಿದಂತೆ ಮುಖಂಡರಾದ ನಾಗರಾಜ ಕರ್ಪೂರ್, ಶಿವಾನಂದ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ರಾಜಕುಮಾರ ಕುಂಬಾರ, ಬಾಲಾಜಿ ಕುಂಬಾರ, ಕಾಶಿನಾಥ್ ಕುಂಬಾರ, ಶ್ರೀಕಾಂತ್ ಕುಂಬಾರ, ಪವನ್ ಕುಂಬಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸಾರ್ವಜನಿಕರು ಸೇರಿದಂತೆ ಕುಂಬಾರ ಸಮಾಜದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular