ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರಗಳ ಬಂದ್ ಮಾಡುವಂತೆ ರಾಜ್ಯ ಸರ್ಕಾರ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದು, ಸಾರ್ವಜನಿಕ ಹಿತಾಸಕ್ತಿಯಲ್ಲಿ ರಾಜಕೀಯ ಇರಬೇಕು ಎಂದು ಕಟುವಾಗಿ ತಿಳಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಮೇ 14, 2025 ಹಾಗೂ ಆಗಸ್ಟ್ 2, 2025ರಂದು ಜನೌಷಧಿ ಕೇಂದ್ರಗಳಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆದು, ಆಸ್ಪತ್ರೆಗಳ ಆವರಣ ಖಾಲಿ ಮಾಡುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಗಳ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ್ದು, ಜನೌಷಧಿ ಕೇಂದ್ರಗಳು ಕಳೆದ 5ರಿಂದ 7 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ, ಇದು ಅವುಗಳ ಅಗತ್ಯತೆಯನ್ನು ಸ್ಪಷ್ಟಪಡಿಸುತ್ತದೆ. ಯಾವುದೇ ಸಾರ್ವಜನಿಕ ಹಾನಿ ಅಥವಾ ಕಾನೂನು ಉಲ್ಲಂಘನೆ ನಡೆದಿರುವುದನ್ನು ಸರ್ಕಾರ ಸಾಬೀತುಪಡಿಸಿಲ್ಲ ಎಂದು ತಿಳಿಸಿದೆ.
ಸಂಸ್ಥಾತ್ಮಕ ಅಹಂಕಾರದ ಸಂಘರ್ಷದಲ್ಲಿ ನಾಗರಿಕರೇ ತೊಂದರೆ ಅನುಭವಿಸುತ್ತಾರೆ, ಇಂತಹ ಪರಿಸ್ಥಿತಿಗಳನ್ನು ತಡೆಯುವುದೇ ಸಂವಿಧಾನಾತ್ಮಕ ನ್ಯಾಯಾಲಯಗಳ ಕರ್ತವ್ಯ. ಗೊಂದಲದಿಂದ ಹುಟ್ಟಿದ ಹಾಗೂ ಆತುರದಲ್ಲಿ ಜಾರಿಗೆ ತಂದ ಆದೇಶಗಳು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದದ್ದು.
ಇನ್ನೂ ಜನೌಷಧಿ ಕೇಂದ್ರಗಳು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕಡಿಮೆ ದರದಲ್ಲಿ ಗುಣಮಟ್ಟದ ಜನರಿಕ್ ಔಷಧಿಗಳನ್ನು ಸಾರ್ವಜನಿಕರಿಗೆ ಒದಗಿಸುವುದು ಇದರ ಉದ್ದೇಶ. ಏಳು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳ ವಿರುದ್ಧ ಒಂದು ದೂರು ಸಹ ಇಲ್ಲ, ಇದು ಅರ್ಜಿದಾರರ ನ್ಯಾಯಸಮ್ಮತ ನಿರೀಕ್ಷೆಯನ್ನು ಬಲಪಡಿಸುತ್ತದೆ. ಅಷ್ಟಕ್ಕೂ ಇಂತಹ ಕೇಂದ್ರಗಳು ಹೇಗೆ ಹಾನಿಕಾರಕವಾಗಿವೆ ಎಂಬುದನ್ನು ವಿಶದಪಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡೂ ಆದೇಶಗಳನ್ನು ಹೈಕೋರ್ಟ್ ಸಂಪೂರ್ಣವಾಗಿ ರದ್ದುಪಡಿಸಿದೆ ಎನ್ನಲಾಗಿದೆ.



