Wednesday, March 4, 2026
Google search engine

Homeರಾಜ್ಯಸುದ್ದಿಜಾಲಹೋಳಿಯ ಭಾವೈಕ್ಯದ ಬಣ್ಣಗಳಲ್ಲಿ ಮಿಂದೆದ್ದ ಬೆಳಗಾವಿ ಮಂದಿ.

ಹೋಳಿಯ ಭಾವೈಕ್ಯದ ಬಣ್ಣಗಳಲ್ಲಿ ಮಿಂದೆದ್ದ ಬೆಳಗಾವಿ ಮಂದಿ.

ವರದಿ :ಸ್ಟೀಫನ್ ಜೇಮ್ಸ್.

ಹೋಳಿಯ ಭಾವೈಕ್ಯದ ಬಣ್ಣಗಳಲ್ಲಿ ಮಿಂದೆದ್ದ ಬೆಳಗಾವಿ ಮಂದಿ

ಬೆಳಗಾವಿ: ಬಹು ಭಾಷೆ, ಬಹು ಸಂಸ್ಕೃತಿಗಳ ನಾಡುಬೆಳಗಾವಿಯಲ್ಲಿ ಮಂಗಳವಾರ ಹೋಳಿ ಹಬ್ಬದ ಅಂಗವಾಗಿ ಭಾವೈಕ್ಯದ ಬಣ್ಣಗಳು ಚಿಮ್ಮಿದವು.

ನಗರವೂ ಏರಿದಂತೆ ಜಿಲ್ಲೆಯ ಬಹುಪಾಲು ಬೀದಿಗಳಲ್ಲಿ, ವೃತ್ತಗಳಲ್ಲಿ, ಮೈದಾನಗಳಲ್ಲಿ ಬಣ್ಣದೋಕುಳಿಯದ್ದೇ ಸಡಗರ. ಬೆಳಿಗ್ಗೆ 6ರಿಂದಲೇ ಕುಣಿದು ಕುಪ್ಪಳಿಸಿದ ಯುವಕ- ಯುವತಿಯರು ಮಧ್ಯಾಹ್ನದವರೆಗೂ ಬಣ್ಣಗಳಲ್ಲಿ ಮಿಂದೆದ್ದರು.

ನಗರದಲ್ಲಂತೂ ಯಾವುದೇ ಗಲ್ಲಿ ಮತ್ತು ರಸ್ತೆಗೆ ಕಾಲಿಟ್ಟರೂ, ಸಪ್ತವರ್ಣಗಳೇ ತುಂಬಿದ್ದವು. ಕನ್ನಡ- ಮರಾಠಿಗರೆಲ್ಲ ಒಂದಾಗಿ ಪರಸ್ಪರ ಬಣ್ಣಗಳನ್ನು ಹಚ್ಚಿ, ಗಾಳಿಯಲ್ಲಿ ತೂರಿ, ನೀರಿನಲ್ಲಿ ಕಲಿಸಿ ಸುರಿದು ಖುಷಿಪಟ್ಟರು. ಸಿಳ್ಳೆ, ಕೇಕೆ ಹಾಕುತ್ತ ಬೈಕುಗಳಲ್ಲಿ ನಗರ ಸುತ್ತಿ ಖುಷಿ ಹಂಚಿದರು.

ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರದ ಮುಂದೆ ಹೋಳಿ ಹಬ್ಬದ ದಿನವಾದ ಮಂಗಳವಾರ ಉರುಳು ಸೇವೆ ಮಾಡಿದ ಯುವಜನರುವಿವಿಧ ಬಡಾವಣೆಗಳು ಮತ್ತು ಮುಖ್ಯರಸ್ತೆಗಳಲ್ಲಿ ಸೋಮವಾರ ರಾತ್ರಿ ಕಾಮದಹನ ಮಾಡಿ, ಮಂಗಳವಾರ ಬೆಳಿಗ್ಗೆಯೇ ಹಬ್ಬ ಶುರು ಮಾಡಿದರು. ಮಕ್ಕಳು ಗಲ್ಲಿಗಲ್ಲಿ ಓಡಾಡಿ, ತಮ್ಮ ಓರೆಗೆಯವರಿಗೆ ದ್ರವರೂಪದ ಬಣ್ಣ ಎರಚಿ ಕುಣಿದು ಕುಪ್ಪಳಿಸಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಯಸ್ಕರು ಮತ್ತು ಹಿರಿಯರು ಬಣ್ಣದ ಸಂಭ್ರಮಕ್ಕೆ ಮಾರುಹೋದರು.ಕಾಲೇಜು, ರಸ್ತೆ, ಕಾಕತಿವೇಸ್, ಕಾಂಗ್ರೆಸ್, ಡಾ.ರಾಜ್‌ಕುಮಾ‌ರ್ ರಸ್ತೆ, ಶ್ರೀಕೃಷ್ಣ ದೇವರಾಯ ಸರ್ಕಲ್ ಹಾಗೂ ಎಲ್ಲ ಅಡ್ಡರಸ್ತೆಗಳಲ್ಲಿ ಜನದಟ್ಟಣೆ ಮತ್ತು ವಾಹನದಟ್ಟಣೆ ಅಧಿಕವಾಗಿತ್ತು. ಸ್ನೇಹಿತರ ಬಳಗಗಳು, ವಿವಿಧ ಸಂಘಟನೆಗಳು, ಮಹಿಳಾ ಮಂಡಳಗಳ ಸದಸ್ಯೆಯರು ಒಂದೆಡೆ ಸೇರಿ ಹಾಡಿ, ಕುಣಿದು, ಭಜನೆ ಮಾಡಿದರು. ಮಹಿಳೆಯರು ಗಂಡುಗಚ್ಚೆ ಹಾಕಿ, ಬೈಕ್, ಸ್ಕೂಟರ್‌ಗಳನ್ನೇರಿ ಇಡೀ ನಗರ ಸುತ್ತಿ ಹೋಳಿ ಹಬ್ಬದ ಶುಭಾಶಯ ಬಿತ್ತರಿಸಿದರು.

RELATED ARTICLES
- Advertisment -
Google search engine

Most Popular