ಬಳ್ಳಾರಿ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ಚಾಲೆಂಜಂಗ್ ಸ್ಟಾರ್ ದರ್ಶನ್ ಅವರು ಜೈಲುಪಾಲಾಗಿದ್ದಾರೆ. ಮತ್ತೊಂದೆಡೆ ದರ್ಶನ್ ಬಿಡುಗಡೆಗಾಗಿ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಬಳ್ಳಾರಿ ಜಿಲ್ಲೆ ಕುರುಗೋಡಿನ ಬಸವೇಶ್ವರ ದೇಗುಲದಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿ, ಮಂಗಳಾರತಿ ಎತ್ತಿದ್ದಕ್ಕೆ ಅರ್ಚಕ ಮಲ್ಲಿ ಎನ್ನುವರನ್ನು ಧಾರ್ಮಿಕ ದತ್ತಿ ಇಲಾಖೆ ಅಮಾನತು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಆಕ್ರೋಶ ಭುಗಿಲೆದ್ದಿದೆ. ಭಾನುವಾರ ಅಮಾವಾಸ್ಯೆ ದಿನದಂದು ನಟ ದರ್ಶನ್ ಪೋಟೋಗಳಿಗೆ ಪೂಜೆ ಮಾಡಲಾಗಿದೆ.
ವಿಶೇಷ ಧಾರ್ಮಿಕ ಪೂಜೆಯ ಮೂಲಕ ಮೂರ್ತಿ ಕೆಳಗೆ ದರ್ಶನ್ ಪೋಟೊ ಇಟ್ಟು ಪೂಜೆ ಸಲ್ಲಿಕೆ ಮಾಡಲಾಗಿದೆ. ಅರ್ಚಕರೇ ದರ್ಶನ್ ಅವರ ಪೋಟೊ ಇಟ್ಟು ಪೂಜೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಟ ದರ್ಶನ್ ಅವರ ಐದಾರು ಭಾವಚಿತ್ರಗಳನ್ನ ಬಸವೇಶ್ವರರ ಮೂರ್ತಿಯ ಅಕ್ಕಪಕ್ಕ ಇಟ್ಟು ಪೂಜೆ ಮಾಡಲಾಗಿದೆ.
ಸದ್ಯ ಪೂಜೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೂರ್ತಿ ಕೆಳಗೆ ನಟನ ಭಾವಚಿತ್ರ ಹಾಕಿದ ಹಿನ್ನೆಲೆ ಪರ-ವಿರೋಧದ ಚರ್ಚೆ ಶುರುವಾಗಿದೆ.
ಅರ್ಚಕ ಅಮಾನತು
ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ನಟ ದರ್ಶನ್ ಪೋಟೊ ಇಟ್ಟು ಪೂಜೆ ಮಾಡಿ, ಮಂಗಳಾರತಿ ಮಾಡಿದ ಅರ್ಚಕ ಮಲ್ಲಿ ಎಂಬವರನ್ನು ಅಮಾನತು ಮಾಡಲಾಗಿದೆ. ದೇವಸ್ಥಾನದ ರೂಢಿ ಸಂಪ್ರದಾಯಕ್ಕೆ ಧಕ್ಕೆ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆ ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅಮಾನತು ಮಾಡಿ, ವಿಚಾರಣೆ ಮುಗಿಯೋವರೆಗೂ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದ್ದಾರೆ.