2023 – 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ಪಿರಿಯಾಪಟ್ಟಣ: ಸಹಕಾರ ಸಂಘದ ಅಭಿವೃದ್ಧಿಯಲ್ಲಿ ಷೇರುದಾರ ಸದಸ್ಯರ ಪಾತ್ರ ಪ್ರಮುಖವಾಗಿದೆ ಎಂದು ನೆಲ ಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಹೆಚ್.ಜಿ ಶಿವಶಂಕರ್ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಸಂಘದ 2023 – 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು, ಮುಂಬರುವ ದಿನಗಳಲ್ಲಿ ಸಂಘಕ್ಕೆ ಹೊಸದಾಗಿ ಷೇರುದಾರ ಸದಸ್ಯರನ್ನು ಸೇರಿಸಿಕೊಂಡು ಪಿಗ್ಮಿ ಸಂಗ್ರಹ ಮಾಡುವ ಆಲೋಚನೆಯಿದೆ, ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ಸಹಯೋಗದೊಂದಿಗೆ ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ತಾಲೂಕಿನಲ್ಲಿ ಜಾರಿಗೊಳಿಸಲಾಗಿದೆ ಎಂದರು.

ಮೈಕ್ಯಾಪ್ಸ್ ಸಂಸ್ಥೆ ಕಾರ್ಯಕ್ರಮ ಸಮನ್ವಯಾಧಿಕಾರಿ ರಾಜಪ್ಪ ಅವರು ಮಾತನಾಡಿ ಐಟಿಸಿ ಸಂಸ್ಥೆ ಆರ್ಥಿಕ ಸಹಯೋಗದೊಂದಿಗೆ ತಾಲೂಕಿನಲ್ಲಿ ಬಂಗಾರದ ಭವಿಷ್ಯದೆಡೆಗೆ ಯೋಜನೆಯಲ್ಲಿ 150ಕ್ಕೂ ಹೆಚ್ಚು ಕೆರೆಗಳ ಹೂಳೆತ್ತಿಸಲಾಗಿದೆ, ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಸೇರಿದಂತೆ ಅರಣ್ಯ ಇಲಾಖೆಯೊಂದಿಗೆ ಸಂಸ್ಥೆ ವತಿಯಿಂದ ಸಹ ಹಲವು ಜಾತಿಯ ಗಿಡಗಳನ್ನು ರೈತರಿಗೆ ಉಚಿತವಾಗಿ ನೀಡಿ ನೆಲ ಜಲ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದ್ದು ರೈತರು ಸಂಸ್ಥೆ ವತಿಯಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮೈಕ್ಯಾಪ್ಸ್ ಸಂಸ್ಥೆ ಅಧಿಕಾರಿ ವೀಣಾ ಅವರು ನೆಲ ಜಲ ಸಂರಕ್ಷಣೆ ಮತ್ತು ಹವಾಮಾನ ವೈಪರೀತ್ಯದ ಬಗ್ಗೆ ಮಾಹಿತಿ ನೀಡಿ ಮಾತನಾಡಿ ವಾತಾವರಣದಲ್ಲಿನ ಏರುಪೇರಿನಿಂದಾಗಿ ಸಕಾಲಕ್ಕೆ ಮಳೆಯಾಗದೆ ರೈತರ ಬೆಳೆ ನಷ್ಟವಾಗುತ್ತಿದೆ ರೈತರು ಒಂದೇ ಬೆಳೆಗೆ ಸೀಮಿತವಾಗದೆ ವಾತಾವರಣಕ್ಕೆ ತಕ್ಕಂತೆ ಕೃಷಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳೆಗಳನ್ನು ಬೆಳೆಯಬೇಕು, ನಾವು ಬೆಳೆದ ಮರ ನಾವೇ ಬಳಸಿಕೊಳ್ಳುವ ಉದ್ದೇಶದಿಂದ ರೈತರಿಗೆ ಉಚಿತವಾಗಿ ಸಸಿಗಳನ್ನು ನೀಡುತ್ತಿದ್ದು ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಈ ಸಂದರ್ಭ ಉಪಾಧ್ಯಕ್ಷ ಕೆ.ಎಸ್ ಲೋಕಪಾಲಯ್ಯ, ನಿರ್ದೇಶಕರಾದ ಶಿವಸ್ವಾಮಿ, ಕೆ.ಬಿ ಶಿವಕುಮಾರಸ್ವಾಮಿ, ಎಂ.ಎಲ್ ನವೀನ, ಕೆ.ಕೃಷ್ಣೇಗೌಡ, ಎ.ಕುಮಾರ, ಡಿ.ಟಿ ಸತೀಶ, ಎಚ್.ಎ ವೆಂಕಟೇಶ್, ಕೆ.ವಿ ಆನಂದ್, ಎಸ್.ಕೆ ಜ್ಯೋತಿ, ಇಂದ್ರ, ವೆಂಕಟೇಶ್, ಎ.ಟಿ ಮಂಜುನಾಯಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಹರೀಶ, ಮೈಕ್ಯಾಪ್ಸ್ ಸಂಸ್ಥೆ ವಿಸ್ತರಣಾಧಿಕಾರಿಗಳಾದ ಕೃಷ್ಣಾಚಾರಿ, ಚಂದ್ರಪ್ಪ, ಕಾರ್ತಿಕ್, ಸಂಜಯ್, ಸತೀಶ್ ಆರಾಧ್ಯ ಮತ್ತು ಶೇರುದಾರ ಸದಸ್ಯರು ಇದ್ದರು.