ಹುಣಸೂರು: ದೇಶದ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮಹತ್ವವಾಗಿದ್ದು ಶಿಕ್ಷಕರು ಮಕ್ಕಳಿಗೆ ತಮ್ಮಲ್ಲಿರುವ ವಿದ್ಯೆಯನ್ನು ಧಾರೆ ಎರೆಯಬೇಕೆಂದು ಪರಿಶಿಷ್ಟ ವರ್ಗಗಳ ಕಲ್ಯಾಣಿ ಇಲಾಖೆಯ ತಾಲ್ಲೂಕು ಕಲ್ಯಾಣಾಧಿಕಾರಿ ಹೆಚ್.ಸಿ. ಬಸವರಾಜು ಕರೆ ನೀಡಿದರು.
ತಾಲ್ಲೂಕಿನ ನೆಲ್ಲೂರುಪಾಲ ಆಶ್ರಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನನಗೆ ಶಿಕ್ಷಕನಾಗಬೇಕೆಂಬ ಆಸೆ ಇತ್ತು. ಆದರೆ ಶಿಕ್ಷಕನಾಗದಿದ್ದರೂ ಸಹಶಿಕ್ಷಕರೊಡನೆ ಕೆಲಸ ಮಾಡುವ ಭಾಗ್ಯ ಸಿಕ್ಕಿದೆ, ಮಾಡುವ ಕೆಲಸದಲ್ಲಿ ತೃಪ್ತಿ ಇದೆ. ಬುಡಕಟ್ಟು ಜನರ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಉತ್ತಮ ನಾಗರೀಕರನ್ನಾಗಿ ಮಾಡಿ ಸ್ವಾವಲಂಬಿಗಳಾಗಲು ಶ್ರಮಿಸಬೇಕು ಎಂದ ಅವರು ಆಶ್ರಮ ಶಾಲೆಗಳಲ್ಲಿ ಕೆಲಸ ಮಾಡುವವರಲ್ಲಿ ಸಮಸ್ಯೆಗಳಲ್ಲಿದ್ದು ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಗಮನಕ್ಕೆ ತರಲಾಗುವುದು. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ದಿನ ಒಳ್ಳೆ ದಿನಗಳು ಬರುತ್ತವೆ. ಅಲ್ಲಿಯವರೆಗೆ ಸಹನೆಯಿಂದ ಇದ್ದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿಯೊಬ್ಬರು ಸೇವಾಮನೋಭಾವನೆಯಿಂದ ಕೆಲಸ ಮಾಡಬೇಕು ಎಂದರು.
ಈ ಸಮಾರಂಭದಲ್ಲಿ ಮುಖ್ಯಶಿಕ್ಷಕರಾದ ಹೆಚ್.ಎಸ್. ಚೇತನ್‌ಕುಮಾರ್, ಮೋಹನ್, ಲಕ್ಷ್ಮಣ್ ಸಿ., ಶಿವಕುಮಾರ್, ಸಣ್ಣಯ್ಯ, ರಾಧಿಕ, ಕಛೇರಿ ಅಧೀಕ್ಷಕಿ ಪುಷ್ಪ, ಚಂದ್ರಕಲಾ, ಹಾಗೂ ಆಶ್ರಮ ಶಾಲೆಯ ಎಲ್ಲಾ ಶಿಕ್ಷಕರಿದ್ದರು.