Tuesday, April 22, 2025
Google search engine

Homeರಾಜ್ಯಸುದ್ದಿಜಾಲದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಅಪಾರ-ಲೀಲಾವತಿ

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಅಪಾರ-ಲೀಲಾವತಿ

ಪಿರಿಯಾಪಟ್ಟಣ: ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ತಿಳಿಸಿದರು.

ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬೆಟ್ಟದಪುರ ಯೋಜನಾ ಕಚೇರಿ ವತಿಯಿಂದ ನಡೆದ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮದ್ಯಪಾನ ಹವ್ಯಾಸದಿಂದ ಸಮಾಜದಲ್ಲಿ ಎಷ್ಟೋ ಮಂದಿ ತಮ್ಮ ಆರೋಗ್ಯ ಹಾಳು ಮಾಡಿಕೊಂಡು ಅಕಾಲಿಕ ಮರಣ ಹೊಂದುವ ಜೊತೆಗೆ ಕುಟುಂಬದಲ್ಲಿ ಸಹ ಅಶಾಂತಿ ನೆಲೆಸಲು ಕಾರಣರಾಗಿದ್ದಾರೆ ಅದನ್ನು ಪರಿಣಾಮಕಾರಿಯಾಗಿ ತಡೆಯಲು ನಮ್ಮ ಸಂಸ್ಥೆ ಸದಾ ಯತ್ನಿಸುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಉಪನ್ಯಾಸಕರಾದ ಲಕ್ಷ್ಮಿಕಾಂತ್ ಅವರು ಮಾತನಾಡಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಟ್ಟಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ, ಮಾನಸಿಕ ದೌರ್ಬಲ್ಯ ಸಹವಾಸ ದೋಷದಿಂದ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ, ಕೆಟ್ಟ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳುವುದರಿಂದ ಆರೋಗ್ಯ ಹಾಳು ಮಾಡಿಕೊಳ್ಳುವ ಜೊತೆಗೆ ಮಾನಸಿಕ ನೆಮ್ಮದಿ ಸಹ ಇರದೆ ಆರ್ಥಿಕವಾಗಿ ಹಿಂದುಳಿಯಬೇಕಾಗುತ್ತದೆ ಎಂದರು.

ಬೆಟ್ಟದಪುರ ಆರಕ್ಷಕ ಠಾಣೆ ಸಬ್ ಇನ್ಸ್ಪೆಕ್ಟರ್ ಸ್ವಾಮಿ ನಾಯಕ್ ಅವರು ಮಾತನಾಡಿ ಸಮಾಜದ ಬದಲಾವಣೆಗೆ ಶ್ರಮಿಸುತ್ತಿರುವ ಧರ್ಮಸ್ಥಳ ಯೋಜನೆ ಕೆಲಸ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಬಿ.ಜೆ ದೇವರಾಜ್ ಅವರು ಮಾತನಾಡಿ ಯಾವುದೇ ಸರ್ಕಾರಗಳು ಮಾಡದ ಸಮಾಜಮುಖಿ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ದೇಶದಾದ್ಯಂತ ಕೈಗೊಂಡು ಸಮಾಜದ ಏಳಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸಂಸ್ಥೆಯ ಬೆಟ್ಟದಪುರ ಯೋಜನಾಧಿಕಾರಿ ಸಂತೋಷ್ ಕುಮಾರ್ ಜೈನ್ ಅವರು ಮಾತನಾಡಿ ಸಂಸ್ಥೆ ವತಿಯಿಂದ ಧರ್ಮಧಿಕಾರಿಗಳಾದ ವೀರೇಂದ್ರ ಹೆಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮ ಅವರ ಮಾರ್ಗದರ್ಶನದಲ್ಲಿ ಮಧ್ಯಪಾನ ಮುಕ್ತ ಸಮಾಜ ನಿರ್ಮಾಣ, ಕೆರೆಗಳ ಸಂರಕ್ಷಣೆ, ಸದಸ್ಯರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ಮಂಜುರಾತಿ ಸೇರಿದಂತೆ ನೂರಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡು ಸಮಾಜದ ಬದಲಾವಣೆಗೆ ಶ್ರಮಿಸಲಾಗುತ್ತಿದೆ ಎಂದರು.

ಈ ವೇಳೆ ಸ್ವ ಉದ್ಯೋಗಕ್ಕೆ ಪೂರಕವಾದ ಸಾಲ ಮಂಜೂರಾತಿ ಪತ್ರ ಹಾಗು ಅರೋಗ್ಯ ರಕ್ಷಾದಲ್ಲಿ ಮಂಜೂರಾದ ಹಣದ ಚೆಕ್ ಅನ್ನು ಫಲಾನುಭವಿಗಳಿಗೆ ವಿತರಿಸಲಾಯಿತು, ಈ ಸಂದರ್ಭ ಜನಜಾಗೃತಿ ವೇದಿಕೆ ಸದಸ್ಯರಾದ ರಾಮಚಂದ್ರ, ಮಲ್ಲೇಶ್, ಮಹದೇವ್, ಅರೋಗ್ಯ ಸಹಾಯಕಿ ದೇವಕಿ, ಬೆಟ್ಟದಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಮಂಜುಳಾ, ಸಂಸ್ಥೆಯ ಜ್ಞಾನವಿಕಾಸ ಸಮನ್ವಯಾಧಿಕಾರಿ ಮಮಿತಾ, ಚಿಕ್ಕನೇರಳೆ ವಲಯ ಮೇಲ್ವಿಚಾರಕಿ ಕೀರ್ತಿ, ಕಣಗಾಲು ವಲಯ ಮೇಲ್ವಿಚಾರಕ ಸುರೇಶ್, ಆವರ್ತಿ ವಲಯ ಮೇಲ್ವಿಚಾರಕ ರಂಜಿತ್, ಅತ್ತಿಗೋಡು ವಲಯ ಮೇಲ್ವಿಚಾರಕ ದಾಮೋದರ್, ನವಜೀವನ ಸಮಿತಿ ಸದಸ್ಯರು, ಒಕ್ಕೂಟ ಸದಸ್ಯರು, ಸೇವಾಪ್ರತಿನಿಧಿಗಳು ಇದ್ದರು.

RELATED ARTICLES
- Advertisment -
Google search engine

Most Popular