ತುಮಕೂರು : ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ತುಮಕೂರು ಜಿಲ್ಲೆಯ ಸಚಿವಾಕಾಂಕ್ಷಿ ಶಾಸಕರು ತಮ್ಮದೇ ಆದ ಶೈಲಿಯಲ್ಲಿ ಲಾಬಿ ಆರಂಭಿಸಿದ್ದಾರೆ. ಈ ಬಾರಿ ಕೇವಲ ರಾಜಕೀಯ ನಾಯಕರ ಮೊರೆ ಹೋಗುವುದಷ್ಟೇ ಅಲ್ಲದೆ, ಸಮುದಾಯದ ಪೀಠಾಧಿಪತಿಗಳ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಶಾಸಕರು ಮುಂದಾಗಿದ್ದಾರೆ.
ಡಿಸಿಎಂ ಭೇಟಿ ಮಾಡಿದ ಶ್ರೀಗಳು
ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ವಿ. ವೆಂಕಟೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು, ಭೋವಿ ಸಮುದಾಯದ ಪೀಠಾಧಿಪತಿಗಳಾದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದರು. ಅಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿಯಾದ ಶ್ರೀಗಳು, ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆಸಿದರು.
ಸಮುದಾಯದ ಬಲದೊಂದಿಗೆ ಬೇಡಿಕೆ
ರಾಜ್ಯದಲ್ಲಿ ಭೋವಿ ಸಮುದಾಯದ ಮೂವರು ಶಾಸಕರು ಇದ್ದು, ಅವರಲ್ಲಿ ಅನುಭವಿ ಮತ್ತು ಅರ್ಹರಾಗಿರುವ ಹೆಚ್.ವಿ. ವೆಂಕಟೇಶ್ ಅವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ನೀಡಲೇಬೇಕು ಎಂಬುದು ಶ್ರೀಗಳ ಪ್ರಮುಖ ಆಗ್ರಹವಾಗಿದೆ. ಸಮುದಾಯದ ನಾಯಕನಿಗೆ ಸಚಿವ ಸ್ಥಾನ ಸಿಗುವ ಮೂಲಕ ರಾಜಕೀಯ ಪ್ರಾತಿನಿಧ್ಯ ದೊರೆಯಲಿ ಎಂಬುದು ಭಕ್ತರ ಆಶಯವಾಗಿದೆ.
ರಹಸ್ಯ ಸಭೆಗಳ ಸುಳಿವು
ಒಂದೆಡೆ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಶ್ರೀಗಳು ಮಾತುಕತೆ ನಡೆಸುತ್ತಿದ್ದರೆ, ಇನ್ನೊಂದೆಡೆ ಕಟ್ಟಡದ ಹೊರಭಾಗದಲ್ಲಿ ಶಾಸಕ ಹೆಚ್.ವಿ. ವೆಂಕಟೇಶ್ ಹಾಗೂ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಸುಮಾರು ಅರ್ಧಗಂಟೆಗಳ ಕಾಲ ಪ್ರತ್ಯೇಕವಾಗಿ ರಹಸ್ಯ ಮಾತುಕತೆ ನಡೆಸಿದರು. ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಒಟ್ಟಾರೆಯಾಗಿ ಜಿಲ್ಲೆಯ ಪ್ರಭಾವಿ ನಾಯಕರ ಸಮ್ಮುಖದಲ್ಲೇ ಸಮುದಾಯದ ಸ್ವಾಮೀಜಿಗಳ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಲಾಬಿ, ಮುಂಬರುವ ದಿನಗಳಲ್ಲಿ ಸಂಪುಟ ವಿಸ್ತರಣೆಯ ಸಮೀಕರಣಗಳನ್ನು ಹೇಗೆ ಬದಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.



