ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ರಾಜ್ಯದಲ್ಲಿ ಈಗ ಸಿಎಂ ಬದಲಾವಣೆಯಾದರೆ ಒಬ್ಬ ಭ್ರಷ್ಟ ಹೋಗಿ ಮತ್ತೊಬ್ಬ ಭ್ರಷ್ಟ ಬಂದಂತಾಗುತ್ತದೆ. ಹೀಗಾಗಿ ಸಿಎಂ ಬದಲಾದರೆ ಸಾಲದು, ಸರ್ಕಾರವೇ ಬದಲಾದರೆ ಮಾತ್ರ ರಾಜ್ಯದ ಪರಿಸ್ಥಿತಿ ಸುಧಾರಿಸಬಲ್ಲದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಿಂದ ಹೋಗಬೇಕಿದೆ. ಆಗ ಮಾತ್ರ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಏಕೆಂದರೆ ಕಾಂಗ್ರೆಸ್ ಡಿಎನ್‌ಎದಲ್ಲಿಯೇ ಭ್ರಷ್ಟಾಚಾರ ಇದೆ ಎಂದು ಆರೋಪಿಸಿದರು.
ಬಹುತೇಕ ಜಿಲ್ಲೆಗಳಲ್ಲಿ ಮಂತ್ರಿಗಳು ಜನರ ಸಂಪರ್ಕ ಕಳೆದುಕೊಂಡಿದ್ದಾರೆ. ಕೆಲ ಸಚಿವರು ಸಹಕಾರ ಸಂಘಗಳ ಚುನಾವಣೆಯಲ್ಲಿ ಮುಳುಗಿದ್ದಾರೆ. ಜನರ ಕಷ್ಟ ಕೇಳುವ ಸಂವೇದನೆ ಅವರಿಗೆ ಇಲ್ಲ. ಚುನಾವಣೆ ಮುಗಿದ ಮೇಲಾದರೂ ಜನರಿಗೆ ಸಂವೇದನೆ ತೋರಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ಸಿನಲ್ಲಿ ನಾನು ಸಿಎಂ, ನಾನು ಸಿಎಂ ಚರ್ಚೆ ನಡೆದಿದೆ. ಯಾರು ಸಿಎಂ ಎಂಬ ಚರ್ಚೆ ಮುಖ್ಯವಲ್ಲ. ಜನ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದಾರೆ. ಯಾರೇ ಸಿಎಂ ಆದರೂ ಕಾಂಗ್ರೆಸ್ ಪಕ್ಷದ ಸರ್ಕಾರವೇ ಇರುತ್ತದೆ. ಹೀಗಾಗಿ ಯಾರಾದರೂ ಸಿಎಂ ಆಗಲಿ. ಮೊದಲು ಜನರ ಕಷ್ಟಗಳಿಗೆ ಸ್ಪಂದಿಸಲಿ ಎಂದರು.
ಸರ್ಕಾರಕ್ಕೆ ಗುತ್ತಿಗೆದಾರರ ಪತ್ರ ಓದಿ ನಾಚಿಕೆ ಆಗಲಿಲ್ಲವಾ? ಜನ ಏನು ಎಂದುಕೊಳ್ಳುತ್ತಾರೆಂಬ ಅರಿವು ಆಗಿಲ್ಲವಾ? ಕಮೀಷನ್ ಡಬಲ್ ಆಗಿದೆ ಎಂದು ನಿಮ್ಮ ಸರ್ಕಾರಕ್ಕೆ ಕೊಟ್ಟಿರುವ ಸರ್ಟಿಫಿಕೇಟ್ ಅದು. 69 ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೀರಿ? ಅದರ ಪಟ್ಟಿ ಕೊಡಬೇಕಾ? ಅಡುಗೆ ಎಣ್ಣೆಯಿಂದ ಕುಡಿಯುವ ಎಣ್ಣೆವರೆಗೂ ಎಲ್ಲ ಬೆಲೆ ಏರಿಕೆ ಹೆಚ್ಚಿಸಿದ್ದಿರಿ. ಪೆಟ್ರೋಲ್ ಡಿಸೇಲ್ ಮೇಲೆ ಹೆಚ್ಚಿನ ಸೆಸ್ ಹಾಕಿದ್ದೀರಿ. ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿಮೆ ಮಾಡಿ ಜನರಿಗೆ ಅನುಕೂಲ ಮಾಡಿದೆ. ಈಗಲಾದರೂ ನೀವು ಏರಿಸಿರುವ ಬೆಲೆಗಳನ್ನು ಇಳಿಸಿ ಎಂದು ಕೇಳಿದರು