Friday, April 4, 2025
Google search engine

Homeರಾಜ್ಯ2024-25ನೇ ಸಾಲಿನ 4 ರಾಷ್ಟ್ರೀಯ, 15 ರಾಜ್ಯ ಪ್ರಶಸ್ತಿ ಘೋಷಣೆ

2024-25ನೇ ಸಾಲಿನ 4 ರಾಷ್ಟ್ರೀಯ, 15 ರಾಜ್ಯ ಪ್ರಶಸ್ತಿ ಘೋಷಣೆ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024-25ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ 19 ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಘೋಷಿಸಿದೆ.

ರಾಷ್ಟ್ರೀಯ ಪ್ರಶಸ್ತಿ ವಿಭಾಗದಲ್ಲಿ ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿಯು ನಾಲ್ವರು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಡಾ.ಎಸ್.ಆರ್. ಗುಂಜಾಳ ಅವರು ‘ಬಸವ ರಾಷ್ಟ್ರೀಯ ಪುರಸ್ಕಾರ’, ಬೆಂಗಳೂರಿನ ಪಂಡಿತರತ್ನ ಎ.ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ಗೆ ‘ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ’, ಬಸಪ್ಪ ಎಚ್. ಭಜಂತ್ರಿಯವರು ‘ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ಮುಂಬೈಯ ಬೇಗಂ ಪರ್ವೀನ್ ಸುಲ್ತಾನಾ ಅವರು ‘ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಈ ನಾಲ್ಕು ಪ್ರಶಸ್ತಿಗಳು ತಲಾ 10 ಲಕ್ಷ ರೂ. ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತವೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗದಲ್ಲಿ ಕೆ.ರಾಜ್ ಕುಮಾರ್ ಅವರು ‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’, ಡಾ.ಹೇಮಾ ಪಟ್ಟಣಶೆಟ್ಟಿಯವರು ‘ಅಕ್ಕಮಹಾದೇವಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಸಾಹಿತ್ಯ, ನಾಟಕ ವಿಭಾಗದಲ್ಲಿ ಡಾ. ಬಿ.ಎ.ವಿವೇಕ ರೈಯವರು ‘ಪಂಪ ಪ್ರಶಸ್ತಿ’, ಸ. ರಘುನಾಥ ಅವರು ‘ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’, ಡಾ. ವೈ.ಸಿ. ಭಾನುಮತಿಯವರು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಜೆ. ಲೋಕೇಶ್‌ ಅವರು ಬಿ.ವಿ. ಕಾರಂತ ಪ್ರಶಸ್ತಿ, ಕೆ. ನಾಗರತ್ನಮ್ಮರವರು ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ, ಡಾ.ಎಲ್.ಹನುಮಂತಯ್ಯನವರು ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಲಾ ವಿಭಾಗದಲ್ಲಿ ಎಂ.ಜೆ. ಕಮಲಾಕ್ಷಿಯವರು ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಎಂ. ರಾಮಮೂರ್ತಿಯವರು ಜಕಣಚಾರಿ ಪ್ರಶಸ್ತಿ, ನಿಂಗಪ್ಪ ಭಜಂತ್ರಿಯವರು ಜಾನಪದಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಂಗೀತ-ನೃತ್ಯ ವಿಭಾಗದಲ್ಲಿ ಅನಂತ ತೇರದಾಳ(ಹಿಂದೂಸ್ಥಾನಿ ಗಾಯನ)ಯವರು ಶ್ರೀನಿಜಗುಣ-ಪುರಂದರ ಪ್ರಶಸ್ತಿ, ಡಾ. ಎ.ವಿ. ಪ್ರಸನ್ನ(ಗಮಕ ವ್ಯಾಖ್ಯಾನ)ರವರು ಕುಮಾರವ್ಯಾಸ ಪ್ರಶಸ್ತಿ, ಪದ್ಮಿನಿ ರವಿ (ಭರತನಾಟ್ಯ)ಯವರು ಶಾಂತಲಾ ನಾಟ್ಯ ಪ್ರಶಸ್ತಿ, ಪ್ರೊ. ಎಸ್‌. ಮಲ್ಲಣ್ಣ(ಸುಗಮ ಸಂಗೀತ)ರವರು ಸಂತ ಶಿಶುನಾಳ ಶರೀಫ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ 15 ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟನೆ ತಿಳಿಸಿದೆ.

RELATED ARTICLES
- Advertisment -
Google search engine

Most Popular