ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ನಡೆದ ಅಭಿಮಾನದ ಅಭಿನಂದನಾ ಸಮಾರಂಭ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಇದನ್ನು ಪರಿಹರಿಸುವ ಸಲುವಾಗಿ ಕೇಂದ್ರ ಮಂತ್ರಿಯಾಗಿ ನಾನು ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ. ಆದರೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಶುಕ್ರವಾರ ನಡೆದ ಅಭಿಮಾನದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೧೫ ಸಾವಿರ ಮಂದಿ ಯುವಕ, ಯುವತಿಯರು ಉದ್ಯೋಗಕ್ಕಾಗಿ ನನಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.
ನಿರುದ್ಯೋಗ ಸಮಸ್ಯೆ ನೀಗಿಸುವ ಸಲುವಾಗಿ ರಾಜ್ಯದಲ್ಲಿ ಸ್ಥಗಿತಗೊಂಡಿರುವ ಕಾರ್ಖಾನೆಗಳನ್ನು ಪುನರಾರಂಭ
ಮಾಡಿಸಲು ಕೇಂದ್ರ ಸರ್ಕಾರದಿಂದ ಆರ್ಥಿಕ ಸಹಕಾರ ಕೊಡಿಸಲು ಸಿದ್ಧನಿದ್ದೇನೆ. ಈ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ನಾಡಿನ ನಿರುದ್ಯೋಗಿ ಯುವ ಜನತೆಯ ಹಿತದೃಷ್ಟಿಯಿಂದ ನನ್ನ ಜೊತೆ
ಕೈಜೋಡಿಬೇಕು ಎಂದು ಮನವಿ ಮಾಡಲಾಗಿದ್ದರೂ ದ್ವೇಷದ ರಾಜಕಾರಣ ಮಾಡುತ್ತಿರುವ ಸರ್ಕಾರ ನನಗೆ
ಹೆಸರು ಬರುತ್ತದೆಂದು ಸಹಕಾರ ನೀಡುತ್ತಿಲ್ಲ ಎಂದು ದೂರಿದರು.
ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳು ಮಹಿಳೆಯರಿಗೆ ಎರಡು ಸಾವಿರ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಎರಡು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಘೋಷಿಸುವ
ಯೋಜನೆಗಳಿಗೆ ಮತ್ತಷ್ಟು ಸಾಲ ಮಾಡುವ ನಿರೀಕ್ಷೆಯಿದ್ದು, ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಜನತೆಯನ್ನು ಸಾಲದ ಸುಳಿಗೆ ಸಿಲುಕಿಸಲಿದೆ ಎಂದು ಆರೋಪಿಸಿದರು.
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕೇವಲ ೧೯ ಸ್ಥಾನಗಳನ್ನು ಮಾತ್ರ ಪಡೆಯಿತು. ೧೩೬ ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಗಾದಿಯನ್ನು ಅಲಂಕರಿಸಿದ ಸಿದ್ದರಾಮಯ್ಯನವರು ತಮ್ಮ ಕುಚಿ ಮಾತ್ರ ಭದ್ರಪಡಿಸಿಕೊಳ್ಳಲು ಆದ್ಯತೆ ನೀಡಿದ್ದಾರೆಯೇ ಹೊರತು ನಾಡಿನ ಜನರೆ ಹಿತ ಕಾಯುವಲ್ಲಿ ವಿಫಲಗೊಂಡಿದ್ದಾರೆ.
ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಪಡೆದ ಕುಟುಂಬಗಳು ಆತ್ಮಹತ್ಯೆಗೆ ಶರಣಾಗಿರುವುದು ಇದಕ್ಕೆ ಉದಾಹರಣೆ ಎಂದು ಟೀಕಿಸಿದರು. ೨೦೧೮ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ರೈತರು ವಿವಿಧ ಬ್ಯಾಂಕುಗಳು ಮತ್ತು ಸಹಕಾರ ಸಂಘಗಳಲ್ಲಿ ಪಡೆಯಲಾದ ಸಾಲ ಮನ್ನಾ ಮಾಡುವುದರ ಜತೆಗೆ ಮೈಕ್ರೋ ಫೈನಾನ್ಸ್ನಂತಹ ಎಲ್ಲಾ ಮಾದರಿಯ ಸಾಲಗಳನ್ನು ಮನ್ನಾ ಮಾಡಿ ಬಡಜನತೆಯನ್ನು ಋಣಮುಕ್ತರನ್ನಾಗಿ ಮಾಡುವ ಸಲುವಾಗಿ ರಾಷ್ಟçಪತಿಗಳನ್ನು ಭೇಟಿ ಮಾಡಿ ಅಂಕಿತ ಹಾಕಿಸುವ ಸಂದರ್ಭದಲ್ಲಿ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ
ಕೆಳಗಿಳಿಸಲಾಯಿತೆಂದು ಕಾಂಗ್ರೆಸ್ ಪಕ್ಷದವರ ವಿರುದ್ಧ ಹರಿಹಾಯ್ದರು.
ಉಪಮುಖ್ಯಮಂತ್ರಿ ಹುದ್ಧೆ ಸೇರಿದಂತೆ ಹಲವು ರಾಜಕೀಯ ಸ್ಥಾನಮಾನಗಳನ್ನು ನೀಡಿದ ಹೆಚ್.ಡಿ.ದೇವೇಗೌಡರನ್ನು ದ್ವೇಷಿಸುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ಧೆಗೇರಲು ಅಲ್ಪ ಸಹಕಾರ ನೀಡಿದ ಹೆಚ್.ವಿಶ್ವನಾಥ್ ಅವರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿರುವುದು ಎಷ್ಟು ಸರಿ ಎಂದು
ಪ್ರಶ್ನಿಸಿದ ಕುಮಾರಸ್ವಾಮಿ ಕನಿಷ್ಠ ಕೃತಜ್ಞತೆ ಇಟ್ಟುಕೊಳ್ಳದ ಮುಖ್ಯಮಂತ್ರಿಗಳು ದೇವೇಗೌಡರ ಕುಟುಂಬದ ಜೊತೆಗೆ ಮೈಸೂರು ರಾಜವಂಶಸ್ಥರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ, ಶಾಸಕರಾದ ಅಡಗೂರುಎಚ್.ವಿಶ್ವನಾಥ್, ಜಿ.ಡಿ.ಹರೀಶ್‌ಗೌಡ, ಮಾಜಿ ಸಚಿವರಾದ
ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಎಂ.ಪಿ.ನಾಡಗೌಡ, ಡಾ.ಕೆ.ಅನ್ನದಾನಿ ಮಾತನಾಡಿದರು.
ಹೆಚ್.ಡಿ.ಕುಮಾರಸ್ವಾಮಿಯವರ ಗೆಲುವಿಗಾಗಿ ದುಡಿದಂತಹ ವಿವಿಧ ಸಮುದಾಯಗಳ ಪರವಾಗಿ ಎ.ಎಸ್.ಚನ್ನಬಸಪ್ಪ, ಅರ್ಜುನಹಳ್ಳಿಗಣೇಶ್, ದೊಡ್ಡಕೊಪ್ಪಲುನಾಗಣ್ಣ, ಕೃಷ್ಣಶೆಟ್ಟಿ, ದಾಸಶೆಟ್ಟಿಶ್ರೀನಿವಾಸ್, ಭಾಗ್ಯಶಂಕರ್, ಬೋರಶೆಟ್ಟಿ, ಮದನಲಾಲ್‌ಜೈನ್ ಮತ್ತಿತರರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕರಾದ ಅಶ್ವಿನ್‌ಕುಮಾರ್, ಕೆ.ಮಹದೇವ್, ವಿಧಾನಪರಿಷತ್ತಿನ ಸದಸ್ಯರಾದ ಸಿ.ಎನ್.ಮಂಜೇಗೌಡ,
ಕೆ.ವಿವೇಕಾನಂದ, ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ರಾಜ್ಯ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್, ಜಿ.ಪಂ. ಮಾಜಿ ಸದಸ್ಯರಾದ ಎಂ.ಟಿ.ಕುಮಾರ್, ಸಿ.ಜೆ.ದ್ವಾರಕೀಶ್, ಅಮಿತ್.ವಿ.ದೇವರಹಟ್ಟಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಸಹಳ್ಳಿವೆಂಕಟೇಶ್, ವಸ್ತುಪ್ರದರ್ಶನ ಪ್ರಾಧಿಕಾರದ
ಮಾಜಿ ಅಧ್ಯಕ್ಷ ಮಿರ್ಲೆಶ್ರೀನಿವಾಸಗೌಡ, ಮೈಮಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಂ.ಡಿ.ದ್ರಾಕ್ಷಾಯಿಣಿ, ತಾಲೂಕು ಅಧ್ಯಕ್ಷರಾದ ಹೆಚ್.ಸಿ.ಕುಮಾರ್, ಮೆಡಿಕಲ್‌ರಾಜಣ್ಣ, ಪುರಸಭೆ ಸದಸ್ಯರಾದ ಉಮೇಶ್, ಸಂತೋಷ್‌ಗೌಡ, ಕೆ.ಎಲ್.ಜಗದೀಶ್, ಸರೋಜಮಹದೇವ್, ಮಂಜುಳಚಿಕ್ಕವೀರು,ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮುಖಂಡರಾದ, ಹಳಿಯೂರು ಮಧುಚಂದ್ರ, ಕೆಗ್ಗರೆ ಕುಚೇಲ್, ಬಿ.ಎಸ್.ತೋಂಟದಾರ್ಯ, ಬಂಡಹಳ್ಳಿ ಕುಚೇಲ್, ಹಾಜರಿದ್ದರು.
ಸಾ.ರಾ.ಸೇವೆ ಮೈಸೂರು ಜಿಲ್ಲೆಗೆ ಅವಶ್ಯಕ : ಕುಮಾರ ಸ್ವಾಮಿ
ಕೆ.ಆರ್.ನಗರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸೋಲುಂಡ ಸಾ.ರ.ಮಹೇಶ್ ಅವರು ಮುಂದೆ
ಯಾವುದೇ ಚುನಾವಣೆಗಳಲ್ಲಿ ಸ್ಫರ್ಧಿಸುವುದಿಲ್ಲವೆಂದು ನನ್ನ ಬಳಿ ಹಲವಾರು ಬಾರಿ ಹೇಳಿದ್ದಾರೆ. ಮಹೇಶ್‌ರ ಸೇವೆ ಮೈಸೂರು ಜಿಲ್ಲೆಯ ಜನತೆಗೆ ಅವಶ್ಯಕವಾಗಿದ್ದು, ಈ ವಿಚಾರವನ್ನು ಅವರು ಅರಿತು ಚುನಾವಣಾ ರಾಜಕಾರಣದಲ್ಲಿ ಮುಂದುವರೆಯಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ನಡೆದ ಅಭಿಮಾನದ
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ರಾಜಕೀಯದಲ್ಲಿ ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕಾರ ಮಾಡಿ, ಜನರ ಭಾವನೆಗಳಿಗೆ ಆದ್ಯತೆ ನೀಡಬೇಕು ಎಂದು ಸಾ.ರಾ.ಮಹೇಶ್‌ಗೆ ಸಲಹೆ ನೀಡಿದರು.
೬೩ ವರ್ಷಗಳ ಕಾಲ ರಾಜಕಾರಣದಲ್ಲಿರುವ ಹೆಚ್.ಡಿ.ದೇವೇಗೌಡರು ೧೬ ತಿಂಗಳು ಮುಖ್ಯಮಂತ್ರಿ, ೧೧ ತಿಂಗಳು ಪ್ರಧಾನಮಮಂತ್ರಿ, ಎರಡೂವರೆ ವರ್ಷ ನೀರಾವರಿ ಮಂತ್ರಿಯಾಗಿ ಅಧಿಕಾರ ಮಾಡಿದ್ದನ್ನು ಹೊರತುಪಡಿಸಿದರೆ ಉಳಿದ ಅವಧಿ ವಿರೋಧ ಪಕ್ಷದಲ್ಲಿ ಕುಳಿತು ರಾಜ್ಯದ ಜನತೆಯ ಹಿತ ಕಾಯಲು ಶ್ರಮಿಸಿದ್ದಾರೆ. ಇದನ್ನು ಸಾ.ರಾ.ಮಹೇಶ್ ಅರಿಯಬೇಕೆಂದರು.
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಕುರುಬ ಸಮಾಜಗಳ ನಡುವೆ ಎಲ್ಲಾ ಚುನಾವಣೆಗಳಲ್ಲೂ ಸ್ಫರ್ಧೆ ನಡೆಯಲಿದ್ದು, ಜಾತಿ ರಾಜಕಾರಣದಿಂದ ಅಭ್ಯರ್ಥಿಗಳ ಸೋಲು ಮತ್ತು ಗೆಲುವು ನಿರ್ಧಾರವಾಗುತ್ತಿದೆ. ಕುರುಬ ಸಮಾಜದ ಬಂಧುಗಳು ಸೇರಿದಂತೆ ಎಲ್ಲಾ ಸಮಾಜದವರು ಅಭಿವೃದ್ಧಿ ಮತ್ತು ಜನಸೇವೆ ಮಾಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ನನ್ನ ರಾಜಕೀಯ ನಿಷ್ಟೆ ಕುಮಾರಸ್ವಾಮಿ ಅವರಿಗೆ: ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಧ್ಯಕ್ಷರಾಗ ಬೇಕು : ಸಾ.ರಾ.ಮಹೇಶ್
ನನ್ನ ಕೊನೆಯ ಉಸಿರು ಇರುವ ತನಕ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ನಿಷ್ಠಾವಂತನಾಗಿ ಇರುವುದರ ಜೊತೆಗೆ ನಮ್ಮ ಪಕ್ಷಕ್ಕೆ ಮೋಸ ಮಾಡಿ ಹೋದವರಿಗೆ ಯಾವುದೇ ರಾಜಕೀಯ ಅಧಿಕಾರ ಸಿಗದಂತೆ ನೋಡಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಶಪಥ ಮಾಡಿದರು.
ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಡಳಿಸಿದ್ದ ಮತದಾರರ ಕೃತಜ್ಞತೆ ಮತ್ತು ಎಚ್. ಡಿ. ಕುಮಾರಸ್ವಾಮಿ ಅವರ ಅಭಿಮಾನದ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು ಕಳೆದ 20 ವರ್ಷಗಳಿಂದ ಕ್ಷೇತ್ರದ ಮನೆ ಮಗನಂತೆ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದರು.

ನನಗೆ ಭವಿಷ್ಯದಲ್ಲಿ ಯಾವುದೇ ರಾಜಕೀಯ ಅಧಿಕಾರದ ಆಸೆ ಇಲ್ಲ ಅದರ ಬದಲಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು ಮತ್ತೆ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದನ್ನು ನೋಡುವ ಹೆಬ್ಬಯಕೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಮುಂಬರುವ ಎಲ್ಲಾ ಚುನಾವಣೆಗಳು ನನ್ನ ನೇತೃತ್ವದಲ್ಲಿ ನಡೆಯಲಿದೆ ಎಂದು ಘೋಷಣೆ ಮಾಡಿದ ಮಾಜಿ ಸಚಿವರು ಮಾಜಿ ಮಂತ್ರಿಗಳಾದ ದಿವಂಗತ ಎಸ್ ನಂಜಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರಂತೆ ನಾನು ನನ್ನ ಜೀವನದಲ್ಲಿ ಪ್ರಾಮಾಣಿಕ ರಾಜಕಾರಣ ಮಾಡಿದ್ದು ಅಧಿಕಾರ ಅವಧಿಯಲ್ಲಿ ಯಾರಿಂದಲೂ ನಯಾಪೈಸೆ ಪಡೆದಿಲ್ಲ ಎಂದರು.
ಕಳೆದ 15 ವರ್ಷಗಳ ಅವಧಿಯಲ್ಲಿ ನಾನು ಸಚಿವ ಮತ್ತು ಶಾಸಕನಾಗಿದ್ದಾಗ ಮನೆಯಿಂದ ಊಟ ತಂದು ರಸ್ತೆ ಬದಿಯಲ್ಲಿ ಅದನ್ನು ಸೇವಿಸಿ ಎಲ್ಲರ ಸೇವೆ ಮಾಡಿದ್ದರು ಯಾಕೆ ನನ್ನನ್ನು ಜನತೆ ಸೋಲಿಸಿಷರು ಎಂದು ಬಾವುಕರಾದ ಅವರು ನನಗಿಂತ ಉತ್ತಮರು ಇದ್ದಾರೆ ಎಂದು ಭಾವಿಸಿ, ಅವರಿಂದ ಕೆಲಸ ಮಾಡಿಸಿಕೊಂಡರೆ ನನ್ನದೇನು ಅಭ್ಯಂತರವಿಲ್ಲವೆಂದರು.
ಕ್ಷೇತ್ರದಲ್ಲಿ ಮತ್ತು ರಾಜ್ಯದಲ್ಲಿ ನಿಷ್ಠಾವಂತ ಕಾರ್ಯಕರ್ತರು ಇರುವ ತನಕ ಜೆಡಿಎಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ಭವಿಷ್ಯದ ಹಿತ ದೃಷ್ಟಿಯಿಂದ ಜೆಡಿಎಸ್ ಪಕ್ಷಕ್ಕೆ ನಿಖಿಲ್ ಕುಮಾರಸ್ವಾಮಿ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗಬೇಕು ಎಂದು ಪ್ರತಿಪಾದಿಸಿದ ಸಾರಾ ಮಹೇಶ್ ಈ ವಿಚಾರದಲ್ಲಿ ನಾವು ಅವರಿಗೆ ಸಂಪೂರ್ಣ ಬೆಂಬಲ ನೀಡಿ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರಲ್ಲದೆ ಪಕ್ಷವನ್ನು ಬಲಪಡಿಸಲು ಈಗಿಂದಲೇ ಸದಸ್ಯತ್ವ ನೋಂದಣಿ ಮಾಡಿಸಬೇಕೆಂದು ಕರೆ ನೀಡಿದರು.