ಬೆಂಗಳೂರು: ಕೋಗಿಲು ಕ್ರಾಸ್ ಫಕೀರ್ ಬಡಾವಣೆಯಲ್ಲಿ ಒತ್ತುವರಿ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸಚಿವ ಡಾ. ಎಚ್ ಸಿ ಮಹದೇವಪ್ಪ ತಿಳಿಸಿದರು.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೋಗಿಲು ಪ್ರಕರಣದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ವಾದ ಸರಿ ಇಲ್ಲ ಎಂದರು. ಸರ್ಕಾರ ಯಾರ ಲಾಬಿಗೂ ಮಣಿಯುವುದಿಲ್ಲ. ಕಸ ವಿಲೇವಾರಿಗೆ ಸೀಮಿತವಾದ ಜಾಗ ಅದು ಅನಧಿಕೃತವಾಗಿ ಬಡವರೇ ಶೆಡ್ ಹಾಕಿಕೊಂಡಿದ್ದರು. ಜಾಗವೇ ಅತಿಕ್ರಮಣ ಪ್ರವೇಶ. ಕಾಂಗ್ರೆಸ್ ಸರ್ಕಾರ ಅವರನ್ನು ಒಕ್ಕಲೆಬ್ಬಿಸಿಲ್ಲ ಎಂದರು.
ಈ ವೇಳೆ ಪುನರ್ವಸತಿ ಕಲ್ಪಿಸುವುದು ನಮ್ಮ ಜವಾಬ್ದಾರಿ ಎಂದು ಕೋಗಿಲು ಕ್ರಾಸ್ ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೂಚನೆಗೆ ಬಿಜೆಪಿ ಪ್ರತಿಕ್ರಿಯೆ ಬಗ್ಗೆ ಮಾತನಾಡಿ, ಸಿಎಂ ಒಬ್ಬರೇ, ಸೂಪರ್ ಸಿಎಂ ಅದೂ ಇದು ಯಾವುದೂ ಇಲ್ಲ. ದೇಶದ ಯಾರು ಬೇಕಾದರೂ ಯಾವುದೇ ಪ್ರದೇಶದ ಬಗ್ಗೆ ಮಾತಾಡುವ ಹಕ್ಕು ಅಧಿಕಾರ ಇದೆ. ಕೆಸಿ ವೇಣುಗೋಪಾಲ್ ಅವರು ಹೇಳಿರುವುದು ಸರಿಯಿದೆ. ಕೇರಳ ಸಿಎಂ ಹೇಳುವುದು ಸರಿಯಿಲ್ಲ ಎಂದರು.
ವಸತಿ ನೀಡಬೇಕಾಗಿರುವುದು ಸರ್ಕಾರದ ಆದ್ಯತೆಯ ಕೆಲಸವಾಗಿದೆ. ಇದರಲ್ಲಿ ಯಾರ ಓಲೈಕೆಯೂ ಬರುವುದಿಲ್ಲ. ಸರ್ಕಾರ ಗಾಬರಿಯೂ ಇಲ್ಲ, ಹೆದರಿಕೆಯೂ ಇಲ್ಲ. ಯಾರ ಒತ್ತಡಕ್ಕೂ ಸರ್ಕಾರ ಮಣಿಯುವುದಿಲ್ಲ. ಕೇರಳದಲ್ಲಿ ಪ್ರವಾಹ ಆದಾಗ ನಾವೂ ಅಲ್ಲಿ ವಸತಿ ಕಲ್ಪಿಸಿಲ್ವಾ? ಕೆ.ಸಿ.ವೇಣುಗೋಪಾಲ್ ಸಂಸದರು, ಅವರಿಗೆ ಮಾತಾಡುವ ಹಕ್ಕಿದೆ. ಆದರೆ ಅತಿಕ್ರಮ ಪ್ರವೇಶ ಮಾಡಿದವರಿಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಹಿಂದ ಸಮಾವೇಶ ವಿಚಾರವಾಗಿ ಮಾತನಾಡಿ, ರಾಜ್ಯ ಕುಂಬಾರರ ಸಮಾವೇಶ ನಡೆಯುತ್ತಿದೆ. ಮೈಸೂರಿನಲ್ಲಿ ನಾವು ಅಹಿಂದ ಸಮಾವೇಶ ಮಾಡಿ ಅಂತ ಹೇಳಿಲ್ಲ. ಅಹಿಂದ ಸಂಘಟನೆಗಳಿಂದ ಸಮಾವೇಶ ನಡೆಯುತ್ತಿದೆ. ಸಮಾವೇಶ ಮಾಡಬೇಡಿ ಅಂತ ಹೇಳಲು ಆಗುತ್ತಾ? ಎಂದು ಪ್ರಶ್ನಿಸಿದರು.
ಅವರ ವಿಚಾರಗಳು, ಸಮಸ್ಯೆಗಳು ಇದ್ದಾಗ ಧ್ವನಿ ಎತ್ತುತ್ತಾರೆ. ರಾಜ್ಯದಾದ್ಯಂತ ಸಿದ್ದರಾಮಯ್ಯ ಅವರಿಗೆ ಬೆಂಬಲ ಇದೆ. ಹೋರಾಟಗಾರರು, ಸಂಘಟನೆಗಳು, ಜನಸಾಮಾನ್ಯರು, ರಾಜ್ಯದ ಬೆಳವಣಿಗಾಗಿ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಬೇಕು ಎಂಬವುದು ಅವರ ಅಭಿಪ್ರಾಯವಾಗಿದೆ. ಅವರೆಲ್ಲ ಕಾಂಗ್ರೆಸ್ ಗೆ ಬೆಂಬಲ ಕೊಟ್ಟಿದ್ದಾರೆ ಎಂದರು.
ಇನ್ನೂ ಈ ವೇಳೆ ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಿರ್ಮಾನ ಮಾಡಬೇಕು. ಎಲ್ಲ ಆಯಾಮಗಳಲ್ಲಿ ಯೋಚನೆ ಮಾಡಿ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲ ಇಲ್ಲ. ಸರ್ಕಾರ ಸುಭದ್ರವಾಗಿ ಸ್ಥಿರವಾಗಿದೆ. ಪಕ್ಷ ಗಟ್ಟಿಯಾಗಿದೆ, ಪಕ್ಷದ ನಾಯಕರು ಒಗ್ಗಟ್ಟಾಗಿದ್ದೇವೆ. 2028 ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



