ಮೈಸೂರು : ಮೈಸೂರಿನ ಕಾರಂಜಿ ಕೆರೆಯಲ್ಲಿ ರಾಜ್ಯದ ಮೊದಲ ‘ಪೆಂಗ್ವಿನ್ ಪಾರ್ಕ್’ ನಿರ್ಮಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ರಾಜ್ಯ ಸರಕಾರ ನುರಿತ ತಜ್ಞರ ಹುಡುಕಾಟದಲ್ಲಿದೆ. ನಗರದಿಂದ 4 ಕಿ.ಮೀ. ದೂರದಲ್ಲಿರುವ ಕಾರಂಜಿ ಕೆರೆ ವಾಯು ವಿಹಾರಿಗಳು ಹಾಗೂ ಬೋಟಿಂಗ್ ಪ್ರಿಯರ ನೆಚ್ಚಿನ ತಾಣವಾಗಿದೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆಗೆ ಹೋಗಲು ನೇರ ಸಂಪರ್ಕ ವ್ಯವಸ್ಥೆಯಿದೆ.
ಹೀಗಾಗಿ ವಿಶ್ವದರ್ಜೆಯ ಪೆಂಗ್ವಿನ್ ಪಾರ್ಕ್ ನಿರ್ಮಾಣದಿಂದ ಮೈಸೂರು ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಲಿದೆ. ಮೃಗಾಲಯಕ್ಕೆ ಉತ್ತಮ ಆದಾಯ ಬರುತ್ತದೆ ಎಂಬ ಆಶಾಭಾವನೆಯೊಂದಿಗೆ ಕಾರಂಜಿ ಕೆರೆಯಲ್ಲಿ ರಾಜ್ಯದ ಮೊದಲ ‘ಪೆಂಗ್ವಿನ್ ಪಾರ್ಕ್’ ನಿರ್ಮಿಸಲು ರಾಜ್ಯ ಸರಕಾರ 8 ತಿಂಗಳ ಹಿಂದೆ ಘೋಷಣೆ ಮಾಡಿತ್ತು. ಪೆಂಗ್ವಿನ್ ಪಾರ್ಕ್ ರಾಜ್ಯದ ಯಾವ ಭಾಗಗಳಲ್ಲೂಇಲ್ಲ. ಹಾಗೆ ನೋಡಿದರೆ ಭಾರತದಲ್ಲಿ ಮುಂಬಯಿ ಹಾಗೂ ಅಲಹಾಬಾದ್ನಲ್ಲಿ ಬಿಟ್ಟರೆ ಮತ್ತೆಲ್ಲೂ ಪೆಂಗ್ವಿನ್ ಕಾಣಸಿಗುವುದಿಲ್ಲ. ದಕ್ಷಿಣ ಭಾರತದಲ್ಲೂ ಪೆಂಗ್ವಿನ್ ಪಾರ್ಕ್ ಇಲ್ಲ. ಹೀಗಾಗಿ ಕರ್ನಾಟಕದಲ್ಲಿ ಮೊದಲ ಬಾರಿ ‘ಪೆಂಗ್ವಿನ್ ಪಾರ್ಕ್’ ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದೆ.
‘ಪೆಂಗ್ವಿನ್ ಪಾರ್ಕ್ ನಿರ್ಮಾಣಕ್ಕೆ ತಾಂತ್ರಿಕವಾಗಿ ಪರಿಣತಿ ಸಾಧಿಸಿರುವವರು ಬೇಕು. ಎಲ್ಲರಿಗೂ ಅದರ ಬಗ್ಗೆ ಮಾಹಿತಿ ಇರುವುದಿಲ್ಲ. ಮುಂಬಯಿಯಲ್ಲಿ ಇದರ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ಹಾಗೂ ಅಧ್ಯಯನ ನಡೆಸಿರುವವರು ಇದ್ದಾರೆ. ಅಲ್ಲದೆ, ಪೆಂಗ್ವಿನ್ಗೆ ಬೇಕಾಗುವ ವಾತಾವರಣದಿಂದ ಹಿಡಿದು ಅವುಗಳ ವಾಸ ಸ್ಥಳ ಹೇಗಿರಬೇಕು? ಯಾವೆಲ್ಲಾ ಉಪಕರಣಗಳು ಬೇಕು ಎಂಬಿತ್ಯಾದಿ ಮಾಹಿತಿ ನೀಡಲು ನುರಿತ ತಜ್ಞರೇ ಬೇಕು. ಹೀಗಾಗಿ ತಜ್ಞರು ಸಿಕ್ಕ ಬಳಿಕ ಡಿಪಿಆರ್ ಸಿದ್ದಗೊಳ್ಳಲಿದೆ,’’ ಎಂದು ಮೈಸೂರು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮುಂಬಯಿನಲ್ಲಿರುವ ವೀರಮಾತ ಜೀಜಾಬಾಯಿ ಬೋಸಲೆ ಉದ್ಯಾನ ಹಾಗೂ ಮೃಗಾಲಯದಲ್ಲಿ ಪೆಂಗ್ವಿನ್ ಪಾರ್ಕ್ ಇದೆ. ಇಲ್ಲಿ ಹಂಬೋಲ್ಟ್ ಪ್ರಭೇಧದ ಪೆಂಗ್ವಿನ್ಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ಗುಜರಾತ್ನ ಅಲಹಬಾದ್ನ ಸೈನ್ಸ್ ಸಿಟಿಯಲ್ಲಿ ಪೆಂಗ್ವಿನ್ಗಳ ಆಟೋಟಗಳನ್ನು ಕಣ್ತುಂಬಿಕೊಳ್ಳಬಹುದು. 2021ರಲ್ಲಿ ಆಫ್ರಿಕಾದ ದಕ್ಷಿಣ ತುದಿಯಿಂದ ತಂದ ಐದು ಪೆಂಗ್ವಿನ್ಗಳನ್ನು ಇಲ್ಲಿ ಬಿಡಲಾಗಿದೆ. ಸಾಮಾನ್ಯವಾಗಿ ಎಲ್ಲ ಪೆಂಗ್ವಿನ್ಗಳು ದಕ್ಷಿಣ ಗೋಳಾರ್ಧದಲ್ಲಿ ವಾಸಿಸುತ್ತವೆ. ಅಂಟಾರ್ಟಿಕ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕ, ಆಸ್ಪ್ರೇಲಿಯಾ ಮತ್ತು ನ್ಯೂಜಿಲೆಂಡ್ನ ಕೆಲವು ಭಾಗಗಳು ಮತ್ತು ಹಲವು ವಿಭಿನ್ನ ದ್ವೀಪಗಳಲ್ಲಿ ಇವುಗಳನ್ನು ಕಾಣಬಹುದು.
ಯಾವ ವಾತಾವರಣ ಬೇಕು? – ಪೆಂಗ್ವಿನ್ಗಳು ಶೀತ ವಾತಾವರಣ ಹಾಗೂ ತಂಪಾದ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದರೆ, ಅಂಟಾಕ್ರ್ಟಿಕ್ ಪ್ರದೇಶದಿಂದ ಹುಟ್ಟಿದ ಪೆಂಗ್ವಿನ್ ಪ್ರಭೇದಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಆಫ್ರಿಕನ್ ಪೆಂಗ್ವಿನ್ಗಳು ಸಮಶೀತೋಷ್ಣ ಹವಾಮಾನದಲ್ಲೂ ವಾಸಿಸುತ್ತವೆ. ಆದರೆ, ಆಕ್ವೇರಿಯಂನಲ್ಲಿ ವಾಸಸ್ಥಾನ ನಿರ್ಮಿಸಬೇಕಾದರೆ ತಾಪಮಾನದ ಬಗ್ಗೆ ಎಚ್ಚರ ವಹಿಸಬೇಕಿದೆ. ಜತೆಗೆ ಅರಣ್ಯ ಇಲಾಖೆಯು ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಕೃತಕ ತಂಪಾದ ವಾತಾವರಣ ನಿರ್ಮಾಣವಾಗಬೇಕಾದರೆ ಫ್ರೀಜರ್ಗಳು ಮತ್ತು ಹವಾನಿಯಂತ್ರಣಗಳು ಬೇಕು. ಇದನ್ನು ನಿರ್ವಹಿಸಲು ದಿನದ 24 ಗಂಟೆಯೂ ಸಿಬ್ಬಂದಿ ವ್ಯವಸ್ಥೆ ಆಗಬೇಕು.



