ನವದೆಹಲಿ: ಕಣ್ಣಿಗೆ ಕಪ್ಪು ಪಟ್ಟಿ ಧರಿಸಿಲ್ಲದ ಮತ್ತು ಕೈಯಲ್ಲಿ ಖಡ್ಗದ ಬದಲಾಗಿ ಸಂವಿಧಾನದ ಪ್ರತಿ ಹಿಡಿದಿರುವ ನೂತನ ನ್ಯಾಯ ದೇವತೆಯ ಪ್ರತಿಮೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಅನಾವರಣಗೊಳಿಸಲಾಗಿದೆ.
ಸಿಜೆಐ ಡಿ.ವೈ.ಚಂದ್ರಚೂಡ್ ಆದೇಶದಂತೆ ಈ ವಿಗ್ರಹಯನ್ನು ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿದ್ದು, ಇದು ವಸಾಹತು ಶಾಹಿ ಪರಂಪರೆಯನ್ನು ಕಳಚಿಕೊಳ್ಳುವ ಭಾಗವಾಗಿದೆ ಎನ್ನಲಾಗಿದೆ. ಕಣ್ಣು ಪಟ್ಟಿ ಇಲ್ಲದೇ ಕಣ್ಣುಗಳನ್ನು ತೆರೆದಿರುವ ಮತ್ತು ಖಡ್ಗಗಳನ್ನು ಹಿಡಿಯದ ನ್ಯಾಯದೇವತೆಯ ಪ್ರತಿಮೆಯ ಮೂಲಕ ದೇಶದಲ್ಲಿ ಕಾನೂನು ಕುರುಡಾಗಿಲ್ಲ ಮತ್ತು ನ್ಯಾಯದೇವತೆಯು ಶಿಕ್ಷೆಯ ಸಂಕೇತವಲ್ಲ ಎಂಬ ಸಂದೇಶವನ್ನು ಸಾರಲಾಗುತ್ತಿದೆ.
ಈವರೆಗೆ ಕಪ್ಪುಪಟ್ಟಿಯು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಪ್ರತಿನಿಧಿಸುತ್ತಿತ್ತು. ಕೋರ್ಟ್ ಯಾವತ್ತೂ ತನ್ನ ಮುಂದೆ ಬರುವವರ ಸಂಪತ್ತು, ಅಧಿಕಾರ ನೋಡುವುದಿಲ್ಲ ಎಂಬ ಸಂದೇಶ ಸಾರುತ್ತಿತ್ತು. ನ್ಯಾಯದೇವತೆಯ ಕೈಯ್ಯಲ್ಲಿದ್ದ ಖಡ್ಗವು ಅನ್ಯಾಯವನ್ನು ಶಿಕ್ಷಿಸುವ ಅಧಿಕಾರವನ್ನು ತೋರಿಸುತ್ತಿತ್ತು. ಈಗ ನ್ಯಾಯ ಕುರುಡಲ್ಲ ಎಂಬ ಸಂದೇಶದೊಂದಿಗೆ ನ್ಯಾಯದೇವತೆಯ ಕಣ್ಣುಗಳನ್ನು ತೆರೆಯಲಾಗಿದೆ.