ಬೆಂಗಳೂರು: ಭೋವಿ ನಿಗಮದ ಹಗರಣದ ತನಿಖೆ ಎದುರಿಸಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣವನ್ನು ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಸಂಬಂಧ ಸಿಐಡಿ ವಿಚಾರಣೆ ಎದುರಿಸಿದ್ದ ಮಹಿಳೆ ಜೀವಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ ಎಂದು ಅವರು ತಮ್ಮ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು ಎಂದು ತಿಳಿದುಬಂದಿತ್ತು. ಸಿಐಡಿ ತನಿಖಾಧಿಕಾರಿ ಕನಕಲಕ್ಷ್ಮಿ ವಿರುದ್ಧ ಮೃತಳ ಸಹೋದರಿ ಸಹ ಗಂಭೀರ ಆರೋಪ ಮಾಡಿದ್ದರು.
ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್ ದಾಖಲಿಸಿಕೊಂಡಿದದ್ದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಸಿಸಿಬಿಯ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ. ಈ ಹಿನ್ನೆಲೆ ಭಾನುವಾರವೇ (ನ.24) ಎಂದು ಪೊಲೀಸರು ಪ್ರಾಥಮಿಕ ತನಿಖೆಯ ದಾಖಲೆಯನ್ನ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದಾರೆ.
ಸಿಐಡಿ ವಿಚಾರಣೆ ಎದುರಿಸಿದ್ದ ಜೀವಾ:
ಭೋವಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳ ತನಿಖೆ ವೇಳೆ ಭೋವಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಜೀವಾ ಅವರ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂ. ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ವಿಚಾರಣೆ ನಡೆಸಲು ಸಿಐಡಿ ಅಧಿಕಾರಿಗಳು ಜೀವಾ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಅದರಂತೆ ಜೀವಾ ಅವರು ಗುರುವಾರ (ನ.21) ಸಿಐಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿ ಮನೆಗೆ ವಾಪಸ್ ಆಗಿದ್ದರು ಎಂದು ತಿಳಿದುಬಂದಿದೆ.
ಮೃತ ಜೀವಾ ಅವರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವುಡ್ ಮೆಟೀರಿಯಲ್ಸ್ ತಯಾರಿಕಾ ಕಂಪನಿ ಹೊಂದಿದ್ದರು. ಭೋವಿ ಅಭಿವೃದ್ಧಿ ನಿಗಮಕ್ಕೆ ಈ ವುಡ್ ಮೆಟೀರಿಯಲ್ಸ್‌ಗಳನ್ನು ಸರಬರಾಜು ಮಾಡುತ್ತಿದ್ದರು. ಹೀಗಾಗಿ ಅವರ ಖಾತೆಗೆ ಭೋವಿ ಅಭಿವೃದ್ಧಿ ನಿಗಮದಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳು ಜೀವಾ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದರು ಎಂದು ಸಹ ಪೊಲೀಸ್ ಮೂಲಗಳು ತಿಳಿಸಿವೆ.
ಸಿಐಡಿ ಅಧಿಕಾರಿಗಳ ವಿರುದ್ಧ ಪ್ರಕರಣ:
ಜೀವಾ ಅವರ ಕಿರಿಯ ಸಹೋದರಿ ಸಂಗೀತಾ ಅವರು ನೀಡಿದ ದೂರಿನಲ್ಲಿ ವಿಚಾರಣೆ ನೆಪದಲ್ಲಿ ಸಿಐಡಿ ಅಧಿಕಾರಿಗಳು ಅಕ್ಕ ಜೀವಾಗೆ ಅವಮಾನ ಮಾಡಿದ್ದಾರೆ. ಅಂತೆಯೇ ಹಣಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನಮೇರೆಗೆ ಬನಶಂಕರಿ ಠಾಣೆ ಪೊಲೀಸರು ಸಿಐಡಿ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.
11 ಪುಟಗಳ ಡೆತ್ ನೋಟ್?:
ಆತ್ಮಹತ್ಯೆಗೂ ಮುನ್ನ ಮಹಿಳಾ ಉದ್ಯಮಿ ಜೀವಾ 11 ಪುಟಗಳ ಮರಣಪತ್ರ ಬರೆದಿದ್ದಾರೆ. ಅದರಲ್ಲಿ ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳ ವಿಚಾರಣೆ ವಿಚಾರ ಪ್ರಸ್ತಾಪಿಸಿದ್ದಾರೆ. ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ. ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಅಂತೆಯೆ ನನಗೆ ಅವಿವಾಹಿತ ತಂಗಿ ಇರುವುದರಿಂದ ನನ್ನ ಆತ್ಮಹತ್ಯೆ ಸುದ್ದಿಗೆ ಹೆಚ್ಚು ಪ್ರಚಾರ ನೀಡದಂತೆಯೂ ಜೀವಾ ಮರಣಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ಅಧಿಕಾರಿ ಮೂಲಗಳಿಂದ ತಿಳಿದುಬಂದಿದೆ.