ಸ್ಯಾಂಡಲ್ ವುಡ್ ನ ಫ್ರೆಶ್ ಜೋಡಿ ಪೃಥ್ವಿ ಅಂಬಾರ್ ಮತ್ತು ಖುಷಿ ರವಿ ನಟನೆಯ ಹೊಸ ಸಿನಿಮಾ ಸೆಟ್ಟೇರಿದ್ದು, ಇದನ್ನು ಮಂಗಳೂರಿನ ಅಶ್ವಿನ್ ಪದ್ಮರೂಪ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.
ನಿರ್ದೇಶಕರಾಗಿ ಇದು ಅವರಿಗೆ ಮೊದಲ ಸಿನಿಮಾವಾಗಿದ್ದು, ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಬಹುತೇಕ ಮಂಗಳೂರು ಮತ್ತು ಉಡುಪಿಯವರೇ ಹೆಚ್ಚಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕರಾಗಿ ನಟಿಸುತ್ತಿದ್ದು, ಖುಷಿ ರವಿ ನಾಯಕಿಯಾಗಿದ್ದಾರೆ. ಈ ಮೂಲಕ ಜನಪ್ರಿಯ ‘ದಿಯಾ’ ಸಿನಿಮಾ ಜೋಡಿಯನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡುವ ಅವಕಾಶ ಸಿನಿಪ್ರಿಯರಿಗೆ ಸಿಗಲಿದೆ.
ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಪೃಥ್ವಿ ಅಂಬಾರ್
ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಿರ್ದೇಶಕ ಅಶ್ವಿನ್ ಪದ್ಮರೂಪ್, ‘ಕಡಲ ತೀರದ ಪ್ರೇಮ ಕಥೆ ಹೊಂದಿರುವ ಈ ಸಿನಿಮಾವು ರೊಮ್ಯಾಂಟಿಕ್ ಕಾಮಿಡಿ ಜಾನರ್‌ನಲ್ಲಿ ಇರಲಿದೆ. ಈಗಾಗಲೇ ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣವು ಮುಕ್ತಾಯ ಆಗಿದೆ. ಮಂಗಳೂರು ಕೋಸ್ಟಲ್‌ನ ಚಿತ್ರಣವಿರುವ ಇದರಲ್ಲಿ ನಟ ಪೃಥ್ವಿ ಅಂಬಾರ್ ಅವರು ಇದೇ ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಪಾತ್ರಗಳಿರುವ ಈ ಸಿನಿಮಾದಲ್ಲಿ ರಾಹುಲ್ ಅಮೀನ್ ಮತ್ತು ಸಮತಾ ಅಮೀನ್ ಕೂಡ ನಟಿಸುತ್ತಿದ್ದು, ನಾಯಕಿ ಖುಷಿ ರವಿ ಅವರು ಇರುವ ದೃಶ್ಯಗಳ ಚಿತ್ರೀಕರಣ ಇನ್ನಷ್ಟೇ ನಡೆಯಬೇಕಿದೆ’ ಎಂದು ಹೇಳುತ್ತಾರೆ.
‘ದಕ್ಷಿಣ ಕನ್ನಡ ಕರಾವಳಿ ಭಾಗದ ಖ್ಯಾತ ನಿರ್ದೇಶಕ ರಾಹುಲ್ ಅಮೀನ್ ನಟಿಸುತ್ತಿರುವ ಈ ಸಿನಿಮಾದಲ್ಲಿ ನಾನು ಮೊದಲ ಬಾರಿಗೆ ಪೂರ್ಣ ನಿರ್ದೇಶಕನಾಗಿ ಗುರುತಿಸಿಕೊಳ್ಳುತ್ತಿದ್ದೇನೆ. ಬಹಳ ವರ್ಷಗಳಿಂದ ಸಿನಿಮಾ ಉದ್ಯಮದಲ್ಲಿ ಆ್ಯನಿಮೇಷನ್ ಮಾಡುತ್ತಿದ್ದ ನನಗೆ ನಿರ್ದೇಶಕನಾಗಿ ಈ ಸಿನಿಮಾ ಮೊದಲ ಪ್ರಯತ್ನ’ ಎಂದು ಅಶ್ವಿನ್ ಪದ್ಮರೂಪ್ ಹೇಳಿದ್ದಾರೆ.
ಈ ಸಿನಿಮಾದಲ್ಲಿ ಯೂನಿವರ್ಸಲ್ ಕಥೆ ಇದೆ
ಸೆಪ್ಟೆಂಬರ್ ನಲ್ಲಿಇದರ 2ನೇ ಶೆಡ್ಯೂಲ್ ಶುರು ಆಗಲಿದೆ ಎಂದಿರುವ ಅಶ್ವಿನ್ ಪದ್ಮರೂಪ್ ಅವರು, ‘ನಿರ್ದೇಶಕನಾಗಿ ನನಗೆ ಇದರ ಚಿತ್ರೀಕರಣ ಉತ್ತಮ ಅನುಭವ ನೀಡಿದೆ. ಪೃಥ್ವಿ ಅಂಬಾರ್ ಸೇರಿದಂತೆ ಇಡೀ ಚಿತ್ರತಂಡ ನನಗೆ ಉತ್ತಮ ಸಹಕಾರ ಕೊಟ್ಟಿದೆ. ಈ ಚಿತ್ರದ ಶೂಟಿಂಗ್ ಸಸಿಹಿತ್ಲು ಬೀಚ್ ಸೇರಿದಂತೆ ಮಂಗಳೂರಿನ ವಿವಿಧ ಕಡಲ ಕಿನಾರೆಗಳಲ್ಲಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಮಂಗಳೂರಿನಲ್ಲಿ ನಡೆಯುವ ಕಥೆ ಇದ್ದರೂ ಅದರಲ್ಲಿರುವ ವಿಷಯ ಯೂನಿವರ್ಸಲ್ ಆಗಿದೆ. ಆದ್ದರಿಂದ ಇದು ಎಲ್ಲಾಕಡೆಯ ಪ್ರೇಕ್ಷಕರಿಗೆ ರೀಚ್ ಆಗುತ್ತದೆ’ ಎನ್ನುತ್ತಾರೆ ಅಶ್ವಿನ್ ಪದ್ಮರೂಪ್.
ಪೃಥ್ವಿ ಅಂಬಾರ್ ಮುಂದಿನ ಸಿನಿಮಾಗಳು
‘ದಿಯಾ’ ಸಿನಿಮಾದಿಂದ ಫೇಮಸ್ ಆಗಿರುವ ಪೃಥ್ವಿ ಅಂಬಾರ್, ಆ ಚಿತ್ರದ ಹಿಂದಿ ಮತ್ತು ಮರಾಠಿ ರಿಮೇಕ್‌ನಲ್ಲೂ ನಟಿಸಿದ್ದಾರೆ. ಈ ವರ್ಷ ನಟಿಸಿದ್ದ ‘ಪೆಂಟಗನ್’, ‘ದೂರದರ್ಶನ’ ಸಿನಿಮಾಗಳು ಕೂಡ ತೆರೆಕಂಡಿವೆ. ಸದ್ಯ ಅವರ ‘ಭುವನಂ ಗಗನಂ’, ‘For Regn’, ‘ಲೈಫ್ ಈಸ್ ಬ್ಯೂಟಿಫುಲ್’, ‘ಹ್ಯಾಪಿಲಿ ಮ್ಯಾರೀಡ್ ‘ ಸಿನಿಮಾಗಳು ತೆರೆಗೆ ಬರಬೇಕಿದೆ. ತಮಿಳಿನಲ್ಲಿ ‘ಮಳೈ ಪುದಿಕಧ ಮನಿಧನ್’ ಸಿನಿಮಾದಲ್ಲೂ ಪೃಥ್ವಿ ನಟಿಸಿದ್ದಾರೆ.