ಉತ್ತರಪ್ರದೇಶ: ಸಂಭಾಲ್ ಮಸೀದಿಯ ಶಾಹಿ ಈದ್ಗಾ ಸಮಿತಿಯು ಹೈಕೋರ್ಟ್‌ಗೆ ತೆರಳುವವರೆಗೆ ಪ್ರಕರಣವನ್ನು ಮುಂದುವರಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ(ನ.29) ಆದೇಶಿಸಿದೆ.
ಗರ್ವಿ ಪ್ರದೇಶದಲ್ಲಿನ ಶಾಹಿ ಜಾಮಾ ಮಸೀದಿಯ ಸ್ಥಳದಲ್ಲಿ ಶಿವನ ದೇವಸ್ಥಾನವಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ವಿಚಾರಣೆ ಹಿನ್ನೆಲೆಯಲ್ಲಿ ನ್ಯಾಯಾಲಯ ಸಮೀಕ್ಷೆ ನಡೆಸಲು ಆದೇಶ ನೀಡಿತ್ತು. ಅದರಂತೆ ನವೆಂಬರ್ 24 ರಂದು ನಡೆದ ಸಮೀಕ್ಷೆಯ ವೇಳೆ ಹಿಂಸಾಚಾರ ಘರ್ಷಣೆಗಳು ನಡೆದು ನಾಲ್ವರು ಸಾವನ್ನಪ್ಪಿದ್ದರು ಅಲ್ಲದೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಅನೇಕರು ಗಾಯಗೊಂಡರು.
ಸಂಭಾಲ್ ನಲ್ಲಿ ಶಾಂತಿ ಸೌಹಾರ್ದತೆಯನ್ನು ನೆಲೆಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಮತ್ತು ಜನವರಿ 8 ರವರೆಗೆ ಮಸೀದಿ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮುಂದಿನ ಕ್ರಮ ತೆಗೆದುಕೊಳ್ಳದಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿದೆ.