ಎಡತೊರೆ ಮಹೇಶ್
ಎಚ್.ಡಿ.ಕೋಟೆ: 60, 70 ವರ್ಷಗಳಿಂದ ಗೋಮಾಳ, ಹುಲ್ಬಂದಿ ಸೇರಿದಂತೆ ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದ ಜಮೀನಿಗೆ ಸಾಗುವಳಿ ಪಡೆಯಲು ಫಾರಂ ನಂಬರ್ 50, 53 ಹಾಗೂ 57 ನಿರಂತರವಾಗಿ ಅರ್ಜಿ ಸಲ್ಲಿಸುತ್ತಲೇ ಬಂದಿದ್ದರು ಇನ್ನು ಬಹುಪಾಲು ಮಂದಿ ರೈತರಿಗೆ ಭೂಮಿ ಹಕ್ಕು ನೀಡಿಲ್ಲ. ಹಾಗಾಗಿ ಅರ್ಹರಿಗೆ ಸಾಗುವಳಿ ನೀಡಲು ತಾಲೂಕು ಆಡಳಿತ ಮುಂದಾಗಬೇಕು ಎಂದು ಕರ್ನಾಟಕ ಭೂ ಹಕ್ಕೂದಾರರ ವೇದಿಕೆಯ ರೈತ ಮುಖಂಡ ಅಣ್ಣೂರು ಕಾಳೇಗೌಡ ಒತ್ತಾಯಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸರಗೂರು ಮತ್ತು ಎಚ್ ಡಿ ಕೋಟೆ ತಾಲೂಕಿನಲ್ಲಿ 50, 53 ರಲ್ಲಿ 2 ಸಾವಿರ ಅರ್ಜಿ, 57 ರಲ್ಲಿ 9 ಸಾವಿರಕ್ಕೂ ಹೆಚ್ಚು ಅರ್ಜಿಗಳು ಇಲ್ಲಿಯವರೆಗೆ ವಿಲೇವಾರಿ ಆಗದೆ ಇರುವುದು ಕಂಡು ಬಂದಿದೆ. ಈ ಸಂಬಂಧ ಕಂದಾಯ ಅಧಿಕಾರಿಗಳು ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಹಿಂದೆ ನಡೆದ ದರಕಾಸ್ತು ಸಮಿತಿಯಲ್ಲಿ ಅನುಮೋದನೆಗೊಂಡು ಅಧ್ಯಕ್ಷರ ಸಹಿ ಆಗಿರುವ ಕಡತಗಳು ಇನ್ನೂ ಕೂಡ ಸಹ ವಿಲೇವಾರಿ ಆಗಿರುವುದಿಲ್ಲ. ರಾಜ್ಯ ಸರ್ಕಾರ ಕಂದಾಯ ಇಲಾಖೆಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ರೈತರ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಆದೇಶಿಸಬೇಕು ಎಂದು, ಜನಸಾಮಾನ್ಯರು ಪ್ರತಿನಿತ್ಯ ಸಾಗುವಳಿಗಾಗಿ ಸಾವಿರಾರು ಖರ್ಚು ಮಾಡಿ ಅಲೆದಾಟ ನಡೆಸಿದರು ಕೂಡ ಸಾಗುವಳಿ ದೊರಕಿಲ್ಲ ಹಾಗಾಗಿ ಶೀಘ್ರವೇ ಜನಸಾಮಾನ್ಯರಿಗೆ ಸಾಗುವಳಿ ವಿತರಣೆ ಮಾಡಲು ಕ್ರಮ ವಹಿಸಬೇಕು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಶಿವಲಿಂಗಯ್ಯ, ಜೀವಿಕ ಬಸವರಾಜು, ಮಾರ್ಸಲಿನ್ ಗೋಪಾಲ್ ಶೈಲಜ, ಪಾಲಾಕ್ಷ, ಸುಶೀಲಾ ಇದ್ದರು.