‘ಜಸ್ಟ್ ಮ್ಯಾರೀಡ್’ ಸಿನಿಮಾ ತಂಡದಿಂದ ಒಂದು ಗುಡ್ ನ್ಯೂಸ್ ಕೇಳಿಬಂದಿದೆ. ಅದೇನೆಂದರೆ, ಈ ಚಿತ್ರಕ್ಕೆ ಶೂಟಿಂಗ್ ಮುಕ್ತಾಯ ಆಗಿದೆ. ದೊಡ್ಡ ಪರದೆಯಲ್ಲಿ ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ಅವರನ್ನು ಜೋಡಿಯಾಗಿ ನೋಡಬೇಕು ಎಂದು ಕಾದಿರುವ ಅಭಿಮಾನಿಗಳಿಗೆ ಈ ನ್ಯೂಸ್ ಕೇಳಿ ಖುಷಿ ಆಗಿದೆ.
‘ಜಸ್ಟ್ ಮ್ಯಾರೀಡ್’ ಸಿನಿಮಾಗೆ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯತೆ ಪಡೆದ ಅಜನೀಶ್ ಲೋಕನಾಥ್ ಅವರು ಈ ಸಿನಿಮಾದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಸಿ.ಆರ್.ಬಾಬಿ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಅಜನೀಶ್ಗೆ ಸಾಥ್ ನೀಡಿದ್ದಾರೆ. ಸಿ.ಆರ್. ಬಾಬಿ ಅವರು ಇಷ್ಟು ದಿನಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದರು. ಈಗ ಸಿನಿಮಾ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಈ ಸಿನಿಮಾದಲ್ಲಿ 6 ಸುಮಧುರ ಗೀತೆಗಳು ಇರಲಿವೆ. ಅವುಗಳಿಗೆ ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅವುಗಳ ಪೈಕಿ, ಪ್ರಮೋದ್ ಮರವಂತೆ ಬರೆದ, ವಿಜಯ್ ಪ್ರಕಾಶ್ ಧ್ವನಿ ನೀಡಿದ ‘ಅಭಿಮಾನಿಯಾಗಿ ಹೋದೆ..’ ಗೀತೆ ಇತ್ತೀಚಿಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ‘ಜಸ್ಟ್ ಮ್ಯಾರೀಡ್’ ಒಂದು ಲವ್ ಸ್ಟೋರಿ ಸಿನಿಮಾ ಆಗಿದ್ದರೂ ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಇರಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.
‘ಜಸ್ಟ್ ಮ್ಯಾರೀಡ್’ ಚಿತ್ರದಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್, ಅಚ್ಯುತ್ ಕುಮಾರ್, ದೇವರಾಜ್, ಅನೂಪ್ ಭಂಡಾರಿ, ಮಾಳವಿಕಾ ಅವಿನಾಶ್, ಶ್ರುತಿ ಹರಿಹರನ್, ಸಾಕ್ಷಿ ಅಗರವಾಲ್, ಶ್ರುತಿ ಕೃಷ್ಣ, ರವಿಶಂಕರ್ ಗೌಡ, ಶ್ರೀಮಾನ್, ರವಿ ಭಟ್, ಸಂಗೀತಾ ಅನಿಲ್, ವಾಣಿ ಹರಿಕೃಷ್ಣ, ಕುಮುದಾ, ವೇದಿಕಾ ಕಾರ್ಕಳ, ಜಯರಾಮ್ ಮುಂತಾದವರು ನಟಿಸಿದ್ದಾರೆ ಎಂಬುದು ವಿಶೇಷ. ಸಿ.ಆರ್. ಬಾಬಿ ಅವರೇ ಕಥೆ ಬರೆದಿದ್ದಾರೆ. ಅವರ ಜೊತೆ ಸೇರಿ ಧನಂಜಯ್ ರಂಜನ್ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರದ ಸಂಭಾಷಣೆ ರಘು ನಿಡುವಳ್ಳಿ ಅವರದ್ದು.
ಪಿ.ಜಿ. ಛಾಯಾಗ್ರಹಣ, ಶ್ರೀಕಾಂತ್ ಹಾಗೂ ಅಶಿಕ್ ಕುಸುಗೊಳ್ಳಿ ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ. ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.