Friday, April 18, 2025
Google search engine

Homeಸಿನಿಮಾ ‘ಇತ್ಯಾದಿ’ ಸಿನಿಮಾದ ಟ್ರೇಲರ್‌ ಬಿಡುಗಡೆ

 ‘ಇತ್ಯಾದಿ’ ಸಿನಿಮಾದ ಟ್ರೇಲರ್‌ ಬಿಡುಗಡೆ

ಈಗಾಗಲೇ ಸದ್ದಿಲ್ಲದೆ ತನ್ನ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ಇತ್ಯಾದಿ’ ಸಿನಿಮಾ ಸೆನ್ಸಾರ್‌ ಮುಂದೆ ಹೋಗಲು ಅಣಿಯಾಗುತ್ತಿದೆ. ಇದೇ ವೇಳೆ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಮೊದಲ ಹಂತವಾಗಿ “ಇತ್ಯಾದಿ’ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ.

“ಚರಣ್‌ ದೇವ್‌ ಕ್ರಿಯೇಶನ್ಸ್‌’, “ಅದೈತ ಫಿಲಿಂಸ್‌’ ಮತ್ತು “ನೀಲಕಂಠ ಫಿಲಂಸ್‌’ ಬ್ಯಾನರ್‌ನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ಮಹೇಂದ್ರನ್‌, ಶ್ರೀನಿವಾಸ್‌ ಮತ್ತು ನೀಲಕಂಠನ್‌ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಡಿ. ಯೋಗರಾಜ್‌ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಟ್ರೇಲರ್‌ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಗ್‌ ಬಾಸ್‌ ವಿಜೇತ, ನಟ,ನಿರ್ದೇಶಕ ಪ್ರಥಮ್‌ ಮಾತನಾಡಿ, “ತುಣುಕುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಡಿ. ಯೋಗರಾಜ್‌ ಅವರಿಗೆ ಯೋಗ ಹುಡುಕಿಕೊಂಡು ಬರಲಿ. ಈ ಸಿನಿಮಾದಲ್ಲಿ ಪ್ರತಿಭಾವಂತ ತಂಡ ಕೆಲಸ ಮಾಡಿದೆ. ಹಿಂದೆಯೆಲ್ಲಾ ಒಂದು ಸಿನಿಮಾ ತೆರೆಗೆ ಬರುವ ಸಮಯದಲ್ಲಿ ಹೊಸ ನಿರ್ಮಾಪಕರು ಪರಿಚಯವಾಗುತ್ತಿದ್ದರು. ಅದೇ ರೀತಿ ಇಂದು ಆಗುತ್ತಿರುವುದು ಸಂತಸ ತಂದಿದೆ. ನಿಮ್ಮಲ್ಲಿರುವ ಕ್ರಿಯಾಶೀಲತೆಗೆ ಮತ್ತಷ್ಟು ಒಳ್ಳೆಯ ಚಿತ್ರಗಳು ಬರಲಿ’ ಎಂದು ಶುಭ ಹಾರೈಸಿದರು.

ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಡಿ. ಯೋಗರಾಜ್‌, “ಇದೊಂದು ಮರ್ಡರ್‌ ಮಿಸ್ಟರಿ ಇರುವ ಕ್ರೈಂ-ಥ್ರಿಲ್ಲರ್‌ ಕಥೆಯ ಸಿನಿಮಾ. ಶೇಕಡ 25ರಷ್ಟು ನೈಜ ಮತ್ತು ಶೇಕಡ 75ರಷ್ಟು ಕಾಲ್ಪನಿಕ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಶೃಂಗೇರಿ ಬಳಿ ಇರುವ ಬಿಳಿಗೆರೆ ಎಂಬ ಊರಿನಲ್ಲಿ ಕಲ್ಲು ದೇವರು ಇರುತ್ತದೆ. ಅದಕ್ಕೆ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕೆಂಬ ಆಸೆಯಾಗಿರುತ್ತದೆ. ಅದು ಕೊನೆಗೂ ಕಲ್ಲಾಗೇ ಹುಟ್ಟಿಕೊಂಡಿರುತ್ತದೆ. ಊರಿನಲ್ಲಿರುವ ಗರ್ಭಣಿಯರು ಆ ಜಾಗಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇರುತ್ತದೆ. ಆದರೆ ಅಲ್ಲಿಗೆ ಹೋದವರೆಲ್ಲಾ ಕೊಲೆಯಾಗುತ್ತಿರುತ್ತಾರೆ. ಇದನ್ನು ಮಾಡುವವರು ಯಾರು? ಯಾಕೆ ನಡೀತಾ ಇದೆ? ಎಂಬುದನ್ನು ಕುತೂಹಲಕಾರಿಯಾಗಿ ತೋರಿಸಲಾಗಿದೆ’ ಎಂದು ಚಿತ್ರದ ಕಥಾಹಂದರದ ವಿವರಣೆ ನೀಡಿದರು.

ಚಿತ್ರದಲ್ಲಿ ಮಹೇಶ್‌. ಬಿ, ಸಚ್ಚಿನ್‌ ನಾಯಕರಾಗಿ ಅರ್ಚನಾ ಉದಯಕುಮಾರ್‌, ಡಾ. ಸೌಮ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಆಂಜನಪ್ಪ, ತಮಿಳು ಖ್ಯಾತ ನಟ ನಾಗೇಶ್‌ ಪುತ್ರ ಆನಂದಬಾಬು, ಮಂಜುಳಾ ವೆಂಕಟೇಶ್‌, ಮಣಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಎರಡು ಹಾಡುಗಳಿಗೆ ಸಂಗೀತ ಪುಣ್ಯೇಶ್‌ ಸಂಗೀತ ಸಂಯೋಜಿಸಿದ್ದು, ಭರಣಿ ಛಾಯಾಗ್ರಹಣ, ಸಂತೋಷ್‌ ಸಂಕಲನವಿದೆ. ಶೃಂಗೇರಿ, ಚಿಕ್ಕಮಗಳೂರು, ಆಗುಂಬೆ ಸುತ್ತಮುತ್ತ ಸುಮಾರು 62 ದಿನಗಳ ಕಾಲ “ಇತ್ಯಾದಿ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.

RELATED ARTICLES
- Advertisment -
Google search engine

Most Popular