ಬೆಂಗಳೂರು : ಸಹೋದರರ ನಡುವೆ ಜಗಳವಾಗಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಾರಬ್‌ನಗರದ ಶೆಟ್ಟಿ ಗಾರ್ಡನ್ , 9ನೇ ಮುಖ್ಯ ರಸ್ತೆ ಮದರಸ ಸಮೀಪದ ನಿವಾಸಿ ಮೊಹಮ್ಮದ್ ಮುಜಾಯಿದ್ (37) ಎಂಬುವವರೇ ಕೊಲೆಯಾದ ವ್ಯಕ್ತಿ.
ಮೊಹಮ್ಮದ್ ಮುಜಾಯಿದ್ ಹಾಗೂ ಸಹೋದರ ಮೊಹಮ್ಮದ್ ಮುಸಾದ್ ಅವರು ಮದರಸದಲ್ಲಿ ಅರೆಬಿಕ್ ಶಿಕ್ಷಕರು.ಮುಜಾಯಿದ್ ಸಹೋದರ ಮೊಹಮ್ಮದ್ ಮುಸಾದ್ (35) ಬೊಮ್ಮನಹಳ್ಳಿಯಲ್ಲಿ ತಂದೆ-ತಾಯಿಯ ಜೊತೆ ವಾಸವಾಗಿದ್ದಾರೆ.
ಅಣ್ಣನ ಮನೆಗೆ ತಂದೆ -ತಾಯಿ ಕರೆದುಕೊಂಡು ಮುಸಾದ್ ಬಂದಿದ್ದು, ಈ ಮನೆ ಚಿಕ್ಕದಿದ್ದ ಕಾರಣ ಸಹೋದರರಿಬ್ಬರೂ ಮದರಸದಲ್ಲಿ ರಾತ್ರಿ ಮಲಗಲು ಬಂದಿದ್ದಾರೆ.ಆ ಸಂದರ್ಭದಲ್ಲಿ ಇವರಿಬ್ಬರ ನಡುವೆ ಯಾವ ವಿಚಾರಕ್ಕೆ ಗಲಾಟೆಯಾಗಿದೆಯೋ ಗೊತ್ತಿಲ್ಲ. ಹರಿತವಾದ ಚಾಕುವಿನಿಂದ ಮುಸಾದ್ ತನ್ನ ಅಣ್ಣನ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಾಗೂ ತಲೆಗೆ ಇರಿದು ಕೊಲೆ ಮಾಡಿದ್ದಾನೆ.
ಮುಸಾದ್‌ಗೂ ಸಹ ಕೈಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದು ಬೆಳಗ್ಗೆ 6.30 ರ ಸುಮಾರಿನಲ್ಲಿ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ಬಂದಿದ್ದು, ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಮೊಹಮ್ಮದ್ ಮುಜಾಯಿದ್ ಎಂಬ ವ್ಯಕ್ತಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿದೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆಗೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಮುಸಾದ್‌ನಿಂದ ಹೇಳಿಕೆ ಪಡೆದ ನಂತರವಷ್ಟೇ ನಿಖರ ಕಾರಣ ಗೊತ್ತಾಗಲಿದೆ.
ಮೊಹಮ್ಮದ್ ಮುಜಾಯಿದ್ ತಾಯಿಗೆ ಬೈಯುತ್ತಿದ್ದನೆಂಬ ಕಾರಣಕ್ಕೆ ಕೋಪಗೊಂಡು ಸಹೋದರ ಕೊಲೆ ಮಾಡಿದ್ದಾನೆಂದು ಹೇಳಲಾಗುತ್ತಿದ್ದು, ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ.
ಈ ಬಗ್ಗೆ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.



