ಬೆಂಗಳೂರು: ಗುತ್ತಿಗೆದಾರ ಮತ್ತು ಬಿಬಿಎಂಪಿ ಮಾಜಿ ಸದಸ್ಯರಿಗೆ ಜಾತಿನಿಂದನೆ, ಹಣ ಸುಲಿಗೆ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧನಕ್ಕೆ ಒಳ ಗಾಗಿರುವ ಆರ್. ಆರ್. ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ವೈಯಾಲಿ ಕಾವಲ್ ಠಾಣೆ ಪೊಲೀಸರು ನ್ಯಾಯಾ ಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 2 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಮುನಿರತ್ನ ಅವರನ್ನು ಅಶೋಕನಗರ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿ ತಮ್ಮದಲ್ಲ ಎಂದು ಮುನಿರತ್ನ ಹೇಳಿದ್ದಾಗಿ ತಿಳಿದುಬಂದಿದೆ.
ಶನಿವಾರ ಸಂಜೆ ಕೋಲಾರದ ನಂಗಲಿ ಗ್ರಾಮದ ಬಳಿ ಮುನಿರತ್ನ ಅವರನ್ನು ಬಂಧಿಸಿ ನಗರಕ್ಕೆ ಕರೆತಂದು ತಡರಾತ್ರಿಯೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಗಜಾನನ ಭಟ್ ಅವರ ನಿವಾಸಕ್ಕೆ ಹಾಜರು ಪಡಿಸಿ, 2 ದಿನಗಳ ಕಾಲ ವಶಕ್ಕೆ ಪಡೆಯಲಾಯಿತು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಹೆಚ್ಚಿನ ವಿಚಾರಣೆಗಾಗಿ ಅಶೋಕನಗರ ಠಾಣೆಗೆ ಕರೆದೊಯ್ಯಲಾಗಿತ್ತು.
ಒಂದೂವರೆ ತಾಸು ಕಾಲ ಪ್ರಾಥಮಿಕ ವಿಚಾರಣೆ
ಶೇಷಾದ್ರಿಪುರ ಉಪವಿಭಾಗದ ಎಸಿಪಿ ಪ್ರಕಾಶ್ ತಡರಾತ್ರಿಯೇ ಮುನಿರತ್ನ ಅವರನ್ನು ಒಂದೂವರೆ ತಾಸು ಕಾಲ ಪ್ರಾಥಮಿಕ ವಿಚಾರಣೆ ನಡೆಸಿದ್ದರು. ರವಿವಾರ ಬೆಳಗ್ಗೆ ಮತ್ತೂಮ್ಮೆ ತೀವ್ರವಾಗಿ ವಿಚಾರಣೆ ನಡೆಸಿದ್ದು, ಪಾಲಿಕೆ ಸದಸ್ಯ ವೇಲುನಾಯಕರ್‌ಗೆ ಜಾತಿನಿಂದನೆ ಮಾಡಿದ್ದು ನಿಜವೇ? ಎಷ್ಟು ವರ್ಷಗಳಿಂದ ವೇಲು ಪರಿಚಯವಿದ್ದಾರೆ? ನಿಮ್ಮಿಬ್ಬರ ನಡುವೆ ಯಾವ ವಿಚಾರಕ್ಕೆ ಗಲಾಟೆ ಆಗಿತ್ತು? ಗುತ್ತಿಗೆದಾರ ಚೆಲುವರಾಜು ಅವರಿಂದ ಲಂಚ ಕೇಳಿದ್ದೀರಾ? ಯಾವ ಕಾಮಗಾರಿ ಗುತ್ತಿಗೆ ಸಂಬಂಧ ಅವರಿಂದ ಕಮಿಷನ್ ಕೇಳಿದ್ದಿರಿ? ಚೆಲುವರಾಜು ತಮ್ನನ್ನು ಭೇಟಿಯಾದಾಗ ವೇಲು ನಾಯಕರ್ ಬಗ್ಗೆ ಅಶ್ಲೀಲ ಪದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದು ನಿಜವೇ? ಆ ಆಡಿಯೋವನ್ನು ಚೆಲವರಾಜು ವೇಲು ನಾಯಕರ್‌ಗೆ ಕೇಳಿಸಿದ್ದಾರೆ, ಹಾಗಾದರೆ, ಆ ಆಡಿಯೋದಲ್ಲಿರುವುದು ನಿಮ್ಮ ಧ್ವನಿಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಎಸಿಪಿಯವರು ಕೇಳಿದ್ದಾರೆ.
ಅದಕ್ಕೆ ಉತ್ತರಿಸಿರುವ ಮುನಿರತ್ನ, ಆ ಆಡಿಯೋದಲ್ಲಿ ಇರುವುದು ನನ್ನ ಧ್ವನಿಯಲ್ಲ. ನಾನು ಎಂಎಲ್‌ಎ. ಆ ರೀತಿ ಮಾತನಾಡಲಿಲ್ಲ. ನನ್ನ ವಿರುದ್ಧ ಪಿತೂರಿ ಹಾಗೂ ಷಡ್ಯಂತ್ರ ಮಾಡಿದ್ದಾರೆ. ರಾಜಕೀಯ ದ್ವೇಷದಿಂದಲೇ ಈ ರೀತಿ ಪ್ರಕರಣ ದಾಖಲಿಸಿದ್ದಾರೆ. ದೂರುದಾರ ಚೆಲವರಾಜು ತನಗೆ ಪರಿಚಿತ ವ್ಯಕ್ತಿ. ಆದರೆ ಆತನನ್ನು ನಿಂದಿಸಿಲ್ಲ. ಹಲ್ಲೆಯೂ ಮಾಡಿಲ್ಲ. ವೇಲುನಾಯಕರ್‌ಗೂ ಜಾತಿ ನಿಂದನೆ ಮಾಡಿಲ್ಲ. ಯಾರೋ ಮಿಮಿಕ್ರಿ ಮಾಡುವ ವ್ಯಕ್ತಿಗಳ ಮೂಲಕ ಈ ಆಡಿಯೋವನ್ನು ತನ್ನ ರಾಜಕೀಯ ವೈರಿಗಳು ಸೃಷ್ಟಿಸಿದ್ದಾರೆ ಎಂದಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಎಫ್ಎಸ್‌ಎಲ್‌ಗೆ
ಮುನಿರತ್ನ ಅವರ ಧ್ವನಿ ಮಾದರಿ ಯನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಜತೆಗೆ ಆಡಿಯೋವನ್ನು ಕೂಡ ಕಳುಹಿಸಲಾಗಿದೆ. ಪ್ರಾಥಮಿಕ ವರದಿ ಪ್ರಕಾರ, ಆಡಿಯೋದಲ್ಲಿರುವ ಧ್ವನಿ ಬಂಧಿತ ಬಿಜೆಪಿ ಶಾಸಕ ಮುನಿರತ್ನ ಅವರ ಧ್ವನಿಗೆ ಹೋಲಿಕೆ ಆಗುತ್ತಿದೆ. ಆದರೆ ವರದಿ ಬಂದ ಅನಂತರವೇ ಸತ್ಯ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.