ಚಾಮರಾಜನಗರ: ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತ ದೇಶಕ್ಕೆ ಅನ್ನನೀಡುವ ಅನ್ನದಾತನಾಗಿದ್ದು, ದೇಶದ ಬೆನ್ನೆಲುಬು ಕೂಡ ಆಗಿದ್ದಾನೆ. ಇಂತಹ ರೈತರ ಮಹತವ್ವನ್ನು ಸಾರುವ ಸಲುವಾಗಿ, ನಾಳೆ ನಡೆಯುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೂಡ ಅನ್ನದಾತ ಮತಗಟ್ಟೆಗಳನ್ನು ಸ್ಥಾಪಿಸಿದೆ. ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಲೊಕ್ಕನಹಳ್ಳಿ, ಚಿಕ್ಕಮಾಲಾಪುರ ಗ್ರಾಮಗಳಲ್ಲಿ, ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಹರಳೆ, ಹೊನ್ನೂರು ಗ್ರಾಮಗಳಲ್ಲಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಆಲೂರು, ಬಿಸಲವಾಡಿ ಗ್ರಾಮಗಳಲ್ಲಿ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ನಿಟ್ರೆ, ಆಲತ್ತೂರು ಗ್ರಾಮದ ಕೆಲವೊಂದು ಮತಗಟ್ಟೆಗಳಲ್ಲಿ ರೈತರ ಮಹತ್ವವನ್ನು ಸಾರುವ ಅನ್ನದಾತ ಮತಗಟ್ಟೆಗಳನ್ನು ತೆರೆದು ಆಮೂಲಕ ರೈತರು ಮತಗಟ್ಟೆಗಳಲ್ಲಿ ಮತದಾನ ಮಾಡುವ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಂಡಿದೆ.
ಚಾಮರಾಜನಗರ ಅಪರ ಜಿಲ್ಲಾಧಿಕಾರಿ ಗೀತಾಹುಡೇದ ಮಾತನಾಡಿ ಜಿಲ್ಲೆಯಲ್ಲಿ ರೈತರು ಕೃಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಭಿಸಿ, ಜೀವನವನ್ನು ಅವಲಂಬಿಸಿರುವುದರಿಂದ ರೈತರು ಹೆಚ್ಚಿರುವ ಕಡೆ ರೈತರ ಮತದಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಮತಗಟ್ಟೆಗಳಂತೆ ಒಟ್ಟು ಎಂಟು ಅನ್ನದಾತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

ರೈತ ಹೊನ್ನೂರು ಪ್ರಕಾಶ್ ಮಾತನಾಡಿ ಜಿಲ್ಲಾ ಸ್ವೀಪ್ ಸಮಿತಿಯು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ರೈತರ ಮತದಾನ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಅನ್ನದಾತ ಮತಗಟ್ಟೆಗಳನ್ನು ತೆರೆದಿರುವುದು ಶ್ಲಾಘನೀಯವೆಂದರು. ಹೊನ್ನೂರು ಗ್ರಾಮಪಂಚಾಯ್ತಿ ಅಭಿವೃದ್ದಿ ಅಧಿಕಾರಿ ನಿರಂಜನ್ ಮಾತನಾಡಿ ರೈತರು ಮತದಾನ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಗ್ರಾi ಪಂಚಾಯ್ತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ ೨೩೦ ಅನ್ನು ಅನ್ನದಾತ ಮತಗಟ್ಟೆಯನ್ನಾಗಿ ರೂಪಿಸಲಾಗಿದೆ ಎಂದರು.