ಮೈಸೂರು: ಕೆ ಆರ್ ಎಸ್ ರಸ್ತೆಗೆ ಅಧಿಕೃತ ಹೆಸರು ನೀಡಿರುವ ಉಲ್ಲೇಖಗಳಿಲ್ಲ ಎಂಬುದಾಗಿ ಹೇಳುತ್ತಿರುವಂತ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ದಾಖಲೆ ಸಹಿತ ಮೈಸೂರು ಒಡೆಯರ್ ಹಾಗೂ ಸಂಸದ ಯಧುವೀರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ”ಕೆಆರ್‌ಸ್ ರಸ್ತೆಗೆ ಅಧಿಕೃತ ಹೆಸರು ನೀಡಿರುವ ಉಲ್ಲೇಖಗಳಿಲ್ಲ ಎಂದು ಹೇಳುತ್ತಿರುವ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರೇ, ಈ ದಾಖಲೆಗಳನ್ನೊಮ್ಮೆ ನೋಡಿ. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಶ್ರೀ ಮಿರ್ಜಾ ಇಸ್ಮಾಯಿಲ್’ರವರ ದೂರದ ಸಂಬಂಧಿಯೊಬ್ಬರು ಪ್ರಿನ್ಸೆಸ್ ರಸ್ತೆಯಲ್ಲಿ ವಾಸವಿದ್ದರು, ಅವರು ಬರೆದಿರುವಂತಹ at post ಪತ್ರಗಳ ವಿಳಾಸದಲ್ಲಿ ‘ಪ್ರಿನ್ಸೆಸ್ ರಸ್ತೆ’ಯ ಹೆಸರು ಬಳಸಲಾಗಿದೆ. ಕೇಂದ್ರ ಸರ್ಕಾರದ ಭಾರತದ ಮ್ಯಾಪಿಂಗ್ ಮತ್ತು ಸಮೀಕ್ಷೆಯ ಉಸ್ತುವಾರಿ ಹೊಂದಿರುವ ಸರ್ಕಾರಿ ಇಲಾಖೆಯವರ ‘ಮೈಸೂರು ಟೂರ್ ಮ್ಯಾಪ್/ಗೈಡ್’ನಲ್ಲಿರುವ ಮೈಸೂರಿನ ನಕ್ಷೆಯಲ್ಲಿ ‘ಪ್ರಿನ್ಸೆಸ್ ರಸ್ತೆ’ಯನ್ನು ಗುರುತಿಸಿ ಹೆಸರಿಸಲಾಗಿದೆ.
ಅಧಿಕೃತವಾಗಿ 1921ರಲ್ಲಿ ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯು ಇದೇ ರಸ್ತೆಗೆ ‘ಪ್ರಿನ್ಸೆಸ್ ರಸ್ತೆ’ ಎಂದು ನಾಮಕರಣ ಮಾಡಿರುವುದಕ್ಕೆ ದಾಖಲೆ ಇದೆ. ಈ ರಸ್ತೆಗೆ ಮರುನಾಮಕರಣದ ಹೆಸರಿನಲ್ಲಿ ಗೊಂದಲ ಸೃಷ್ಟಿಸುವ ಬದಲು, ಅದರ ಮೂಲಗಳನ್ನು ಪರಿಶೀಲಿಸಿ, ಅಂದಿನ ರಾಜಮನೆತನ ಸಮಾಜಕ್ಕೆ ಕೊಡುಗೆ ನೀಡಿರುವುದನ್ನು ಗುರುತಿಸಿ ಗೌರವಿಸಬೇಕು. ಕಾಲಕಾಲಕ್ಕೂ ಅವರ ಸೇವೆಗಳು ಶಾಶ್ವತವಾಗಿಡುವುದು ಮತ್ತು ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವುದು ಪಾಲಿಕೆ ಮತ್ತು ಸರ್ಕಾರಗಳ ಜವಾಬ್ದಾರಿ ಎಂಬುದಾಗಿ ತಿಳಿಸಿದ್ದಾರೆ.