ಮಂಗಳೂರು(ದಕ್ಷಿಣ ಕನ್ನಡ): ರಾಜಕೀಯವಾಗಿ ಬಿಲ್ಲವ ಮುಖಂಡರನ್ನು ಮುಗಿಸುವ ಹುನ್ನಾರ ನಡೆಯುತ್ತಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಸಂವಿಧಾನವು ಸರ್ವರಿಗೂ ಸಮಪಾಲು-ಸಮಬಾಳು ಖಾತರಿ ಮಾಡಿದ್ದರೂ, ಬಹುಪಾಲು ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳಿಗೆ ಈಗಲೂ ಇದು ಕನಸಾಗಿದೆ. ಕರ್ನಾಟಕದ ಬಿಲ್ಲವ, ಈಡಿಗ, ದೇವರು, ನಾಮಧಾರಿ, ಮಡಿವಾಳ, ವಿಶ್ವಕರ್ಮ, ಅಲೆಮಾರಿ, ಅರೆ ಅಲೆಮಾರಿ, ಬೆಸ್ತ, ತಿಗಳ, ಕ್ಷೌರಿಕ, ದೇವಾಂಗ, ಗೊಲ್ಲ, ಯಾದವ, ಉಪ್ಪಾರ, ಹಾಲಕ್ಕಿ ಒಕ್ಕಲಿಗ, ಮೇದಾರ, ಕುಂಬಾರ, ಗೆಜೆ ಗಾರ ಸೇರಿದಂತೆ ನಾನಾ ಹೆಸರಿನಲ್ಲಿ ಗುರುತಿಸಿ ಕೊಂಡಿರುವ ಸುಮಾರು ಒಂದು ಕೋಟಿ ಜನಸಂಖ್ಯೆ ಇದ್ದರೂ ಇವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಾನಮಾನಗಳಿಂದ ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಕಾರಣ ಈ ಅತಿ ಹಿಂದುಳಿದ ಜಾತಿಗಳಲ್ಲಿ, ಪರಸ್ಪರ ಸಮನ್ವಯತೆ ಮತ್ತು ಒಗ್ಗಟ್ಟಿನ ಕೊರತೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ನಮ್ಮ ಅತಿ ಹಿಂದುಳಿದ ಜಾತಿಗಳ ನಡುವೆ ಪರಸ್ಪರ ಸಂವಾದ ಮತ್ತು ‘ಪರಸ್ಪರ ಕೊಡು ಕೊಳ್ಳುವಿಕೆಯ ಚರ್ಚೆಗಳು ಆಗಬೇಕಾಗಿದೆ ಎಂದರು.
ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಎಲ್ಲರೂ ಒಂದೇ ವೇದಿಕೆಯಲ್ಲಿ ಒಗ್ಗೂಡಲು ‘ಪೂರಕವಾಗಿ ಬೆಂಗಳೂರಿನಲ್ಲಿ ಈ ಎಲ್ಲಾ ಸಮುದಾಯದ ಮುಖಂಡರ ಸಭೆಯನ್ನು ಕರೆಯಲಾಗಿದೆ. ರಾಜ್ಯಾದ್ಯಂತ ಈ ಎಲ್ಲಾ ಸಮುದಾಯವನ್ನೂ ಒಗ್ಗೂಡಿಸಿ ಮುಂದಿನ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಸಂಪುಟಿಸುವ ಕುರಿತೂ ಕೂಡ ಚರ್ಚಿಸಿ ನಿರ್ಧರಿಸಲಾಗುವುದು. ಈ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಸ್ವಾಮೀಜಿಗಳೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಅಂದರು.
ಸೆಪ್ಟೆಂಬರ್ ತಿಂಗಳ 9 ರಂದು (ಶನಿವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಅಂದರು.