Saturday, April 19, 2025
Google search engine

HomeUncategorizedಚಿತ್ರಕಲೆಯಲ್ಲಿ ಅದ್ಭುತ ಚಿಂತನಾ ಶಕ್ತಿಯುಂಟು: ಸಾಹಿತಿ ಬನ್ನೂರು ರಾಜು

ಚಿತ್ರಕಲೆಯಲ್ಲಿ ಅದ್ಭುತ ಚಿಂತನಾ ಶಕ್ತಿಯುಂಟು: ಸಾಹಿತಿ ಬನ್ನೂರು ರಾಜು

ಮೈಸೂರು: ಸಾವಿರ ಸಾವಿರ ಪದಗಳಲ್ಲಿ ಹೇಳುವುದನ್ನು ಕೇವಲ ಒಂದು ಛಾಯಾಚಿತ್ರ ಹೇಳಬಲ್ಲದು. ಹಾಗೆಯೇ ಲಕ್ಷ ಲಕ್ಷ ಅಕ್ಷರಗಳಲ್ಲಿ ತಿಳಿಸುವುದನ್ನು ಒಂದು ಗೆರೆ ಮಾತ್ರದಿಂದ ಅಭಿವ್ಯಕ್ತಿಸುವ ಅದ್ಭುತ ಶಕ್ತಿ ಚಿತ್ರಕಲೆಗುಂಟು ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ನಗರದ ಹೆಬ್ಬಾಳಿನ ಶ್ರೀ ಭೈರವೇಶ್ವರ ನಗರದಲ್ಲಿರುವ ಅಣ್ಣಯ್ಯಪ್ಪ ಮೆಮೋರಿಯಲ್ ಎಜುಕೇಶನ್ ಸೊಸೈಟಿಯ ರಜತ ವರ್ಷದ ಅಂಗವಾಗಿ ಶ್ರೀ ಭೈರವೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಂತರ ಶಾಲಾ ಕಾಲೇಜು ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಲೆ ಪ್ರತಿಯೊಬ್ಬರಿಗೂ ಆಸಕ್ತಿದಾಯಕವಾದ ಅತ್ಯಂತ ಮಹತ್ವಪೂರ್ಣ ವಿಷಯವಾಗಿದ್ದು, ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬಲ್ಲ ಅದ್ಭುತ ಚಿಂತನಾ ಶಕ್ತಿ ಅದಕ್ಕಿದೆ ಎಂದರು.
ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಪಠ್ಯದ ಓದಿಗಷ್ಟೇ ಸೀಮಿತವಾಗದೆ ಇದರಾಚೆಗೂ ತಮ್ಮ ಜ್ಞಾನ ಶಾಖೆ ವಿಸ್ತರಿಸಿಕೊಂಡು ಕೌಶಲ್ಯಾಭಿವೃದ್ಧಿಯತ್ತಲೂ ಆಸಕ್ತಿ ಹೊಂದಬೇಕು. ಅಂತೆಯೇ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಚಿತ್ರಕಲೆಯಂತಹ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಈ ದಿಸೆಯಲ್ಲಿ ತನ್ನ ಬೆಳ್ಳಿ ಹಬ್ಬದ ದ್ಯೋತಕವಾಗಿ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರತೆಗೆಯಲು ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿರುವುದು ಈ ವಿದ್ಯಾ ಸಂಸ್ಥೆಗೆ ವಿದ್ಯಾರ್ಥಿಗಳ ಮೇಲಿರುವ ಕಾಳಜಿಗೆ ಸಾಕ್ಷಿಯಾಗಿದೆ. ಇದು ಖಾಸಗಿ ಶಾಲೆಯಾದರೂ ಇತರರಂತೆ ವ್ಯಾಪಾರೀಕರಣದತ್ತ ಹೋಗದೆ ವಿದ್ಯಾರ್ಥಿಗಳಿಂದ ಅತ್ಯಂತ ಕಡಿಮೆ ಶುಲ್ಕವನ್ನಷ್ಟೇ ತೆಗೆದುಕೊಂಡು ಸೇವಾ ಮನೋಭಾವದಿಂದ ಶಾಲಾ ಕಾಲೇಜುಗಳನ್ನು ನಡೆಸುತ್ತಿರುವ ಶಿಕ್ಷಣ ಪ್ರೇಮಿ ಅಣ್ಣಯ್ಯಪ್ಪನವರ ಆಶಯದ ಶ್ರೀ ಭೈರವೇಶ್ವರ ವಿದ್ಯಾಸಂಸ್ಥೆಯ ಸೇವೆ ನಿಜಕ್ಕೂ ಶ್ಲಾಘನೀಯವಾದುದೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರ ಕಲಾವಿದ ಎಲ್.ಶಿವಲಿಂಗಪ್ಪ ಮಾತನಾಡಿ, ಚಿತ್ರಕಲೆ ಚಿತ್ತಾಕರ್ಷಕವಾದುದು. ಅಷ್ಟೇ ಅಲ್ಲ, ಆಸಕ್ತರಿಗೆಲ್ಲ ಸುಲಭವಾಗಿ ಸಿದ್ಧಿಸುವಂತಹದ್ದು. ಹಾಗಾಗಿ ವಿದ್ಯಾರ್ಥಿಗಳು ಇದರತ್ತ ಹೆಚ್ಚೆಚ್ಚು ಆಸಕ್ತಿ ತಾಳಬೇಕೆಂದು ಚಿತ್ರಕಲೆಯ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.
ಚಿತ್ರ ಕಲಾವಿದೆ ಡಾ.ಜುಮುನಾರಾಣಿ ಮಿರ್ಲೆ ಮಾತನಾಡಿ, ಪೊಲೀಸ್, ಇಂಜಿನಿಯರ್, ವೈದ್ಯ, ನೃತ್ಯ, ಸಾಹಿತ್ಯ, ಜನಪದ ಸೇರಿದಂತೆ ಪ್ರತಿಯೊಂದು ರಂಗದಲ್ಲೂ ಚಿತ್ರಕಲೆ ಎಂಬುದು ಸೇರಿ ಹೋಗಿದೆ. ಎಲ್ಲಕ್ಕೂ ಪೂರಕವಾಗಿ ಚಿತ್ರಕಲೆ ಬೇಕೇ ಬೇಕು. ಇದೊಂದು ಮಹತ್ವಪೂರ್ಣವಾದ ಸರ್ವ ವಿಷಯೋಪಯೋಗಿ ಕಲೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಬನ್ನೂರು ಕೆ.ರಾಜು ಮತ್ತು ಚಿತ್ರ ಕಲಾವಿದ ಎಲ್.ಶಿವಲಿಂಗಪ್ಪ ಹಾಗೂ ಡಾ.ಜಮುನಾರಾಣಿ ಮಿರ್ಲೆ ಅವರನ್ನು ಗೌರವಿಸಲಾಯಿತು. ಶ್ರೀ ಅಣ್ಣಯ್ಯಪ್ಪ ಭೈರವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಎಸ್.ಸೌಮ್ಯ, ಉಪ ಪ್ರಾಂಶುಪಾಲ ಪುರುಷೋತ್ತಮ್, ಮುಖ್ಯ ಶಿಕ್ಷಕಿ ಕಾಮಾಕ್ಷಿ, ಆಡಳಿತಾಧಿಕಾರಿ ಬಿ.ಆರ್.ಪಂಚಾಕ್ಷರಿ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular