Saturday, December 20, 2025
Google search engine

Homeರಾಜಕೀಯಸಿಎಂ ನನ್ನ ನಡುವೆ ಒಪ್ಪಂದ ಆಗಿದೆ, ಅದರಂತೆ ನಡೆದುಕೊಳ್ಳುತ್ತೇವೆ : ಡಿಕೆ ಶಿವಕುಮಾರ್

ಸಿಎಂ ನನ್ನ ನಡುವೆ ಒಪ್ಪಂದ ಆಗಿದೆ, ಅದರಂತೆ ನಡೆದುಕೊಳ್ಳುತ್ತೇವೆ : ಡಿಕೆ ಶಿವಕುಮಾರ್

ಅಂಕೋಲಾ : ನಮ್ಮಲ್ಲಿ ಒಪ್ಪಂದ ಆಗಿದೆ, ಅದರಂತೆ ನಡೆದುಕೊಳ್ಳುತ್ತೇನೆ. ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್‌ ಕೂಡ ಒಂದು ಒಪ್ಪಂದಕ್ಕೆ ಬಂದಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಶುಕ್ರವಾರ ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಆಂದ್ಲೆಯ ಶ್ರೀ ಜಗದೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ಡಿಕೆಶಿ, ಸಂಕಷ್ಟಹರಣ ಹಾಗೂ ಇಷ್ಟಾರ್ಥಸಿದ್ಧಿ ಕಾಳರಾತ್ರಿ ಎಳ್ಳು ಅಮಾವಾಸ್ಯೆ ಮಾಲೆ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿಸಿದ ಮಾಧ್ಯಮಗಳಿಗೆ ಉತ್ತರಿಸಿದರು.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಆಗಮಿಸಿದ ಡಿಕೆಶಿ, ಸುಮಾರು ಒಂದೂವರೆ ಗಂಟೆಗಳ ಕಾಲ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದು, ಪೂಜಾ ಕಾರ್ಯದ ನಂತರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, 5 ವರ್ಷಗಳ ಹಿಂದೆ ಈ ಸ್ಥಳಕ್ಕೆ ಬಂದು ಕುಟುಂಬದ ಕೆಲಸಕ್ಕೆ ಪ್ರಾರ್ಥನೆ ಮಾಡಿದ್ದೆ, ಅದು ಈಡೇರಿತ್ತು. ಮತ್ತೆ ಇಲ್ಲಿಗೆ ಬರುತ್ತೇನೆ ಎಂದಿದ್ದೆ, ಬಂದಿದ್ದೇನೆ. ತಾಯಿ ಜಗದೀಶ್ವರಿ ಆಶೀರ್ವಾದ ಮಾಡು ಎಂದು ಕೇಳಿಕೊಂಡಿದ್ದೇನೆ. ತಾಯಿ ನನ್ನೊಂದಿಗೆ ಮಾತನಾಡಿದ್ದಾಳೆ, ಶುಭ ಸೂಚನೆ ಕೂಡ ನೀಡಿದ್ದಾಳೆ ಎಂದರು.

ಇನ್ನೂ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಖುರ್ಚಿಗೆ ಎರಡೂವರೆ ವರ್ಷ ಅಂತ ಯಾವುದೇ ಒಪ್ಪಂದ ಆಗಿಲ್ಲ. ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಹಾಗೆ ಹೈಕಮಾಂಡ್‌ ಕೂಡ ನನ್ನ ಪರವಾಗಿದೆ ಎಂದು ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿ, ನಾನು ಯಾವತ್ತೂ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರಲ್ಲ ಎಂದು ಹೇಳಿಲ್ಲ. ಹಾಗೆ ಹೈಕಮಾಂಡ್ ಕೂಡ ಅವರ ಪರವಾಗಿಲ್ಲ ಅಂತಾ ಹೇಳಿಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿ ಇದ್ದದ್ದಕ್ಕೆ ಅವರು ಸಿಎಂ ಆಗಿದ್ದಾರೆ. ನಮ್ಮಲ್ಲಿ ಒಪ್ಪಂದ ಆಗಿದೆ, ಅದರಂತೆ ನಡೆದುಕೊಳ್ಳುತ್ತೇನೆ. ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್‌ ಕೂಡ ಒಂದು ಒಪ್ಪಂದಕ್ಕೆ ಬಂದಿದೆ ಎಂದು ಹೇಳಿದರು.

ಅಲ್ಲದೇ ಮುಖ್ಯಮಂತ್ರಿ ಹುದ್ದೆಗಾಗಿ ದೇವರಲ್ಲಿ ಏನಾದರೂ ಪ್ರಾರ್ಥನೆ ಮಾಡಿಕೊಂಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಇದು ನನ್ನ ಹಾಗೂ ತಾಯಿಯ ನಡುವಿನ ವಿಚಾರ. ಆದರೆ ನನಗೆ ತಾಯಿ ನನ್ನ ಜತೆಗಿರುತ್ತಾಳೆ ಎಂಬ ನಂಬಿಕೆ ಇದೆ ಎಂದರು.

ಇನ್ನು 2019ರಲ್ಲಿ ನೀವು ತೊಂದರೆಯಲ್ಲಿದ್ದಾಗ ಇಂತಹದೆ ಸಂದರ್ಭದಲ್ಲಿ ನಿಮಗೆ ಒಳ್ಳೆಯದಾಗುತ್ತದೆ ಎಂದು ತಾಯಿ ಜಗದೀಶ್ವರಿ ದರ್ಶನದಲ್ಲಿ ದಿನಾಂಕ ನೀಡಿದ್ದರು. ಹಾಗೆ ನಿಮ್ಮ ಇಷ್ಟಾರ್ಥಕ್ಕಾಗಿ ಪೂಜೆ ಸಲ್ಲಿಸಿದ ವೇಳೆ ನಿಮಗೇನಾದರೂ ಒಳ್ಳೆಯ ಸಮಯಕ್ಕೆ ದೇವಿ ದಿನಾಂಕ ನಿಗದಿ ಮಾಡಿದ್ದಾಳೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಮುಗುಳು ನಗುತ್ತಲೇ, ಯಾವುದೇ ಉತ್ತರ ನೀಡದೆ ನಿರ್ಗಮಿಸಿದರು.

ದೇವಸ್ಥಾನದ ಒಳಕ್ಕೆ ಉಪ ಮುಖ್ಯಮಂತ್ರಿ ಅವರಿಗೆ ಮಾತ್ರ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಉತ್ತರ ಕರ್ನಾಟಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ ಸೈಲ್‌ ಸೇರಿದಂತೆ ಅನೇಕ ಮುಖಂಡರು ದೇವಸ್ಥಾನದ ಹೊರಭಾಗದಲ್ಲಿಯೆ ನಿಂತಿದ್ದರು. ದೇವಸ್ಥಾನದ ಬಾಗಿಲು ಮುಚ್ಚಿ ಪೂಜಾ ಕಾರ್ಯಗಳು ನಡೆದವು. ಈ ವೇಳೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular