ಬಳ್ಳಾರಿ : ಕಾಂಗ್ರೆಸ್ ಶಾಸಕರ ದಬ್ಬಾಳಿಕೆ ವಿರೋಧಿಸಿ ಬಿಜೆಪಿ ಪಕ್ಷದ ವತಿಯಿಂದ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು ವರಿಷ್ಠರ ಸೂಚನೆಯಂತೆ ನಡೆಸಿಯೇ ತೀರುತ್ತೇವೆ ಎಂದಿದ್ದು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ನಡೆಸುವ ವಿಷಯದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ವರಿಷ್ಠರು ಏನು ಸೂಚನೆ ಕೊಡುತ್ತಾರೋ ಅದರಂತೆ ನಡೆದುಕೊಳ್ಳುವುದಾಗಿ ಶಾಸಕ ಜನಾರ್ಧನ ರೆಡ್ಡಿ ತಿಳಿಸಿದ್ದಾರೆ.
ಬಳ್ಳಾರಿಯಿಂದ ಬೆಂಗಳೂರಿನವರೆಗೆ ಕಾಂಗ್ರೆಸ್‌ನ ದಬ್ಬಾಳಿಕೆ ವಿರೋಧಿಸಿ ಪಾದಯಾತ್ರೆ ನಡೆಸಬೇಕು ಎಂಬುದು ಕಾರ್ಯಕರ್ತರ ಒತ್ತಾಸೆಯಾಗಿದ್ದು, ಈಗಾಗಲೇ ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಇದರ ಬಗ್ಗೆ ಕೇಂದ್ರ ನಾಯಕರಿಗೆ ಮಾಹಿತಿ ನೀಡಿದ್ದಾರೆ. ಸೂಕ್ತ ಕಾಲದಲ್ಲಿ ಅವರು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮುಂದುವರೆದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಹಾಗೂ ಬೇರೆ ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಕೇಂದ್ರ ನಾಯಕರು ಅದರ ಕಡೆ ಗಮನಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷರ ವರದಿಯನ್ನು ಪರಿಶೀಲಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ನಾವು ಪಾದಯಾತ್ರೆಯನ್ನು ಮಾಡಿಯೇ ತೀರುತ್ತೇವೆ ಎಂದು ಶಪಥ ಮಾಡಿದರು.
ಇನ್ನೂ ಇದು ವೈಯಕ್ತಿಕವಾಗಿ ನಡೆಸುತ್ತಿರುವ ಹೋರಾಟವಲ್ಲ. ಇಲ್ಲಿನ ಜನರು ಅನುಭವಿಸುತ್ತಿರುವ ತೊಂದರೆ ಕಿರುಕುಳ ಇದರ ವಿರುದ್ಧ ನಾವು ಹೋರಾಟ ಮಾಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇವೆ ಎಂದರು.
ಅಲ್ಲದೆ ಈ ವೇಳೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರ ದಾಖಲೆಯನ್ನು ಮುರಿದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿನ ಶಾಸಕ ನಾರ ಭರತ್ ರೆಡ್ಡಿಯನ್ನು ಬಂಧಿಸಿ ಮೊದಲು ತಮ್ಮ ಮೇಲಿರುವ ಕಳಂಕವನ್ನು ಕಳೆದುಕೊಳ್ಳಬೇಕೆಂದು ಒತ್ತಾಯಿಸಿದರಲ್ಲದೆ, ಅರಸು ಅವರ ದಾಖಲೆ ಮುರಿದರೆ ಸಾಲದು, ಬದಲಿಗೆ ಬಳ್ಳಾರಿಯಲ್ಲಿ ದಬ್ಬಾಳಿಕೆ ನಡೆಸುತ್ತಿರುವ ಶಾಸಕ ಭರತ್ ರೆಡ್ಡಿ ಹಾಗೂ ಅವರ ಬೆಂಬಲಿಗರನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ಬಳ್ಳಾರಿ ಜನತೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ನೀವು ಅರಸು ಅವರ ದಾಖಲೆಯನ್ನು ಮುರಿದಿರುವುದಕ್ಕೆ ನಾನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಅದೇ ರೀತಿ ನಾರಾ ಭರತ್ ರೆಡ್ಡಿಯನ್ನು ಬಂಧಿಸಿದರೆ ನೀವು ಕಳಂಕರಹಿತ ರೈತ ಮುಖ್ಯಮಂತ್ರಿ ಆಗುತ್ತೀರಿ. ಇಲ್ಲದಿದ್ದರೆ ಜೀವನಪರ್ಯಂತ ಈ ಕಪ್ಪು ಚುಕ್ಕೆ ನಿಮ ಮೇಲೆ ಇರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಮತ್ತು ಶ್ರೀರಾಮುಲು ಬಾಲ್ಯದಿಂದಲೇ ಸ್ನೇಹಿತರು ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಕೆಲವು ಕೆಟ್ಟ ಸಂದರ್ಭದಲ್ಲಿ ಮುನ್ನಡೆಯುತ್ತಿದ್ದೇವೆ ಮುಂದೆ ಇಂತಹ ತಪ್ಪುಗಳು ಆಗುವುದಿಲ್ಲ ಎಂದು ಹೇಳಿದರು. ಪುರಾಣಗಳಲ್ಲಿ ಶ್ರೀ ಕೃಷ್ಣ ಅರ್ಜುನನ ಯುದ್ಧ ನೋಡಿದ್ದೇವೆ ರಾಮಾಂಜನೇಯ ಯುದ್ಧವನ್ನು ಕಂಡಿದ್ದೇವೆ. ಅದೇ ರೀತಿ ನಮ್ಮಿಬ್ಬರ ನಡುವೆ ಏನೇ ಇದ್ದರೂ ಎಂದಿಗೂ ಭಿನ್ನಾಭಿಪ್ರಾಯ ಬರುವುದಿಲ್ಲ. ನಮ್ಮಿಬ್ಬರು ಒಬ್ಬರನ್ನೊಬ್ಬರನ್ನು ನೋಡಿದ ತಕ್ಷಣ ಹೃದಯ ಕರಗುತ್ತದೆ. ಇದಕ್ಕೆ ಮೊನ್ನೆ ನಡೆದ ಘಟನೆಯೇ ಸಾಕ್ಷಿ ಎಂದರು.
ನಾವು ರಾಜಕೀಯ ಕಾರಣಕ್ಕಾಗಿ ಸಮಾವೇಶ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳು ಮಟ್ಕಾ, ದಬ್ಬಾಳಿಕೆ, ರೌಡಿಸಂ ವಿರುದ್ಧ ನಮ ಹೋರಾಟ, ಪ್ರತಿಭಟನೆ, ಸಮಾವೇಶ. ನನಗೆ ರಾಜಕೀಯವಾಗಿ ಪುನರ್ಜನ ನೀಡಬಹುದು. ಅದಕ್ಕಿಂತ ಇಲ್ಲಿನ ಜನರ ನೆಮದಿ ಮುಖ್ಯ ಎಂದರು. ಮೊನ್ನೆ ನಡೆದ ಘಟನೆಯಲ್ಲಿ ಒಬ್ಬ ಅಮಾಯಕ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದಾನೆ. ವೈಯಕ್ತಿಕವಾಗಿ ನಮಗೆ ಇದು ಅತ್ಯಂತ ದುಃಖ ತಂದಿದೆ. ಇದಕ್ಕೆ ಶಾಸಕ ನಾರಾ ಭರತ್ ರೆಡ್ಡಿ ಎಷ್ಟು ಕಾರಣವೋ ಅದೇ ರೀತಿ ಸರ್ಕಾರವು ಪೂರಕ ಕಾರಣ.
ಈ ಘಟನೆ ಕ್ಷುಲ್ಲಕದ ಹಿಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜನರು ಪಾಠ ಕಲಿಸುವ ಕಾಲ ಬಂದೇ ಬರುತ್ತದೆ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ಕೊಡಬೇಕು. ನಮ ಹೋರಾಟ ನಿಲ್ಲುವುದಿಲ್ಲ ಎಂದು ಜನಾರ್ದನ ರೆಡ್ಡಿ ಗುಡುಗಿದರು.



