ಬೆಂಗಳೂರು: ಅಭಿಮಾನಿಯೊಬ್ಬರು ಕೊಟ್ಟ ರಾಘವೇಂದ್ರ ಸ್ವಾಮಿಗಳ ಫೋಟೊ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿ ವಾಪಸ್ ತಳ್ಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಸಿಎಂ ಕಾರಿನಲ್ಲಿ ಬರುತ್ತಿದ್ದಂತೆಯೇ ಕೆಲವು ಮಂದಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅವರಿಗೆ ಮನವಿ ಪತ್ರ ಕೊಡಲು ಮುಂದಾಗಿದ್ದರು.
ಇದೇ ವೇಳೆ ಅಭಿಮಾನಿಯೊಬ್ಬರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಫೋಟೋ ಸಿಎಂಗೆ ಕೊಟ್ಟಿದ್ದು, ತಕ್ಷಣವೇ ಅದನ್ನು ಆತನಿಗೆ ವಾಪಸ್ ಕೊಟ್ಟ ಸಿಎಂ ಆತನನ್ನು ದುರುಗುಟ್ಟಿ ನೋಡಿದ್ದಾರೆ. ಇದೇ ವೇಳೆ ಚಾಣಕ್ಯನ ಕುರಿತಾದ ಪುಸ್ತಕವನ್ನು ಅಭಿಮಾನಿಯೊಬ್ಬ ಕೊಟ್ಟಿದ್ದು, ಅದನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ರಾಯರ ಫೋಟೊ ತಿರಸ್ಕರಿಸಿದ್ದೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯಗೆ ಹಿಂದೂ ದೇವರನ್ನು ಕಂಡರೆ ಆಗಿ ಬರಲ್ಲ. ತಿಲಕ, ನಾಮ ಹಾಗೂ ಕೃಷ್ಣನನ್ನು ಕಂಡರೇ ಆಗಿ ಬರುವುದಿಲ್ಲ. ಅವರಿಗೆ ಟೋಪಿ ಕಂಡರೆ ಮಾತ್ರ ಖುಷಿಯಾಗುತ್ತದೆ. ಟಿಪ್ಪು ಜಯಂತಿ ಮಾಡಿದರು, ಆಗ ಕೋಮು ಗಲಭೆಗಳು ಆದವು. ಕೋಗಿಲು ಲೇಔಟ್ನ ಮುಸ್ಲಿಮರಿಗೆ ಮನೆಗಳು ಕೊಡುವುದು ಇತ್ಯಾದಿ ಅದು ಅವರ ನಿರಂತರ ಪ್ರಕ್ರಿಯೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಬಗ್ಗೆ ರಾಘವೇಂದ್ರ ಸ್ವಾಮಿಗಳ ಅಪ್ಪಟ ಭಕ್ತ ನಟ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದು, ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲಾ, ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪತಪವೈರಾಗ್ಯ ಉಪವಾಸದಿಂದ ಸೇವೆ ಮಾಡುತ್ತಾರೆ, ಆದರೆ ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡದ್ದು. ರಾಯರಿದ್ದಾರೆ, ಎದ್ದು ಬರುತ್ತಾರೆ ಕಾಯಬೇಕು ಎಂದು ರಾಘವೇಂದ್ರ ಸ್ವಾಮಿಗಳ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.




