ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಡಿ ನಿವೇಶನ ಹಂಚಿಕೆಯಲ್ಲಿ ಯಾವುದೇ ಲೋಪವಾಗಿಲ್ಲ, ಬಿಜೆಪಿ ರಾಜಕೀಯ ಕಾರಣಕ್ಕೆ ಮೈಸೂರಿನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಅದಕ್ಕೆ ಕಾಂಗ್ರೆಸ್ ರಾಜಕೀಯವಾಗಿಯೇ ತಿರುಗೇಟು ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ನಾವು ಗೆದ್ದ ಬಳಿಕ ಬಿಜೆಪಿಯವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲೇ ದೊಡ್ಡ ರಾಜ್ಯಗಳ ಪೈಕಿ ಅಧಿಕಾರದಲ್ಲಿರುವುದು ಕರ್ನಾಟಕದಲ್ಲಿ ಮಾತ್ರ. ಅದಕ್ಕಾಗಿ ಇಲ್ಲಿ ನಮನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ತಾವು ಹಿಂದುಳಿದ ವರ್ಗಕ್ಕೆ ಸೇರಿರುವುದರಿಂದ ಬಿಜೆಪಿ ಷಡ್ಯಂತರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿರುವುದಕ್ಕೆ ಡಿ.ಕೆ.ಶಿವಕುಮಾರ್ ಸಹಮತ ವ್ಯಕ್ತಪಡಿಸಿದರು.ಯಾವುದೇ ಹುರುಳಿಲ್ಲದೇ ಇದ್ದರೂ ರಾಜಕೀಯ ಮಾಡುತ್ತಿದ್ದಾರೆ. ಸಮಯ ಬಂದಾಗ ಸೂಕ್ತ ಉತ್ತರ ನೀಡುತ್ತೇವೆ ಎಂದರು.