ಚಾಮರಾಜನಗರ : ಜಿಲ್ಲೆಯಲ್ಲಿ ಗೃಹ ಬಳಕೆಯ ಸಿಲೆಂಡರ್ ಕೊರತೆ ಇಲ್ಲ. ಸಮರ್ಪಕವಾಗಿ ಬುಕ್ ಮಾಡಿದ ಮೂರ್ನಾಲ್ಕು ದಿನಗಳಲ್ಲಿ ಗ್ರಾಹಕರ ಮನೆಗೆ ಪೊರೈಕೆ ಮಾಡಲಾಗುತ್ತಿದೆ ಎಂದು ಮಹೇಶ್ ಗ್ಯಾಸ್ ಏಜೆನ್ಸಿ ಮಾಲೀಕ ಮಹೇಶ್ ಕುದರ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 23 ವಿವಿಧ ಕಂಪನಿಗಳ ಗ್ಯಾಸ್ ಏಜೆನ್ಸಿಗಳಾಗಿದ್ದು, ಜಿಲ್ಲೆಯಲ್ಲಿ ಯುದ್ದ ಆರಂಭವಾದ ದಿನದಿಂದಲು ಯಾವುದೇ ಕೊರತೆ ಇಲ್ಲದೇ ಸಮರ್ಪಕವಾಗಿ ಗೃಹ ಬಳಕೆಯ ಸಿಲಿಂಡರ್ಗಳನ್ನು ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ನಮ್ಮ ಎಲ್ಲಾ ಏಜೆನ್ಸಿಗಳಲ್ಲಿಯೂ ನಿಯಮಿತವಾಗಿ ಸಿಲೆಂಡರ್ ಪೊರೈಕೆಯಾಗುತ್ತಿದ್ದು, ಗ್ರಾಹಕರು ಯಾರು ಸಹ ಗೋದಾಮುಗಳ ಮುಂದೆ ಬರುವುದು ಬೇಡ. ನಾವೇ ನೇರವಾಗಿ ನಿಮ್ಮ ಮನೆಗಳಿಗೆ ತಲುಪಿಸುತ್ತೇವೆ ಎಂದರು.
ಇನ್ನೂ ಜಿಲ್ಲೆಯಲ್ಲಿ 3,32,433 ಗೃಹ ಬಳಕೆ ಸಿಲಿಂಡರ್ಗಳಿದ್ದು, ಪಟ್ಟಣದಲ್ಲಿರುವ ಗ್ರಾಹಕರು 25 ದಿನಕ್ಕೊಂದು ಸಿಲಿಂಡರ್ ಬುಕ್ ಮಾಡಲು ಅವಕಾಶ ಮಾಡಿದೆ. ಗ್ರಾಮಾಂತರ ಪ್ರದೇಶದ ಗ್ರಾಹಕರಿಗೆ 45 ದಿನಕ್ಕೊಂದು ಸಿಲಿಂಡರ್ ನೀಡಲಾಗುತ್ತಿದೆ. ಸಿಂಗಲ್ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ 25 ದಿನಕ್ಕೊಂದು ಸಿಲಿಂಡರ್ ನೀಡಲು ಅವಕಾಶ ಮಾಡಲಾಗಿದೆ. ಗ್ರಾಹಕರು ಈ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಬುಕ್ ಮಾಡಿದರೆ, ಮೂರ್ನಾಲ್ಕು ದಿನಗಳಲ್ಲಿ ಅವರ ಮನೆಗೆ ಸಿಲಿಂಡರ್ ತಲುಪಲಿದೆ ಎಂದು ಮಹೇಶ್ ತಿಳಿಸಿದರು.
ಇತ್ತಿಚೆಗೆ ಸಿಲಿಂಡರ್ ಕೊರತೆ ಇದೆ ಎಂಬ ಕಾರಣದಿಂದ ಹೆಚ್ಚಿನ ಗ್ರಾಹಕರು ಸಿಲಿಂಡರ್ ಬುಕ್ ಮಾಡಿದ್ದಾರೆ. ಹೀಗಾಗಿ ವಿತರಣೆಯಲ್ಲಿ ವ್ಯತ್ಯಯವಾಗಿದೆಯೇ ಹೊರತು ಗೃಹ ಬಳಕೆಯ ಸಿಲಿಂಡರ್ಗಳ ಕೊರತೆಯಾಗಿಲ್ಲ. ಕರ್ಮಷಿಯಲ್ ಸಿಲಿಂಡರ್ಗಳ ಪೊರೈಕೆ ಶೇ. 40 ರಷ್ಟು ಪೊರೈಕೆಯಾಗುತ್ತಿದೆ. ಕಂಪನಿಗಳು ಗೃಹ ಬಳಕೆ ಸಿಲಿಂಡರ್ಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ವಾಣಿಜ್ಯ ಸಿಲೆಂಡರ್ ಬಳಕೆಯಲ್ಲಿ ಸ್ವಲ್ಪ ಮಟ್ಟಿನ ಕಡಿತ ಮಾಡಿದ್ದರು. ಈಗ ಈ ಸಿಲಿಂಡರ್ಗಳನ್ನು ವಿತರಣೆ ಮಾಡಲಾಗುತ್ತಿದೆ. ಇ ಕೆವೈಸಿ ಮಾಡಿಸದ ಗ್ರಾಹಕರಿಗೆ ಸಿಲಿಂಡರ್ ಪೊರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬರು ಇ ಕೆವೈಸಿ ಮಾಡಿಸಿಕೊಳ್ಳಬೇಕೆಂದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜ್ವಾಲೇಶ್ವರಿ ಗ್ಯಾಸ್ ಎಜೆನ್ಸಿಯ ಮಾಲೀಕ ಎಚ್.ಬಿ.ಶಮಿತ್ ಗೋಪಾಲ, ಯಳಂದೂರು ಗೋಪಾಲಸ್ವಾಮಿ ಗ್ಯಾಸ್ ಏಜೆನ್ಸಿಯ ಮಾಲೀಕ ನಿರಂಜನ್ಕುಮಾರ್ ಇದ್ದರು.



