ಬೆಂಗಳೂರು: ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿನ ತಮ್ಮ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸುತ್ತಿರುವಂತೆಯೇ ೪೦ ವರ್ಷಗಳ ಹಿಂದೆಯೇ ಜಮೀನು ಖರೀದಿಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಡಳಿತರೂಢ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಭೂಮಿಯನ್ನು ಖರೀದಿಸಿ ೪೦ ವರ್ಷವಾಗಿದೆ. ಅನೇಕ ಬಾರಿ ಸರ್ವೇ, ತನಿಖೆ ನಡೆಸಲಾಗಿದೆ. ಅಷ್ಟು ವರ್ಷಗಳಿಂದ ಯಾರೂ ನನ್ನ ಬಳಿ ಬಂದಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಎಲ್ಲಿಂದ ಬಂದರು ದೂರುದಾರರು ಎಂದು ಪ್ರಶ್ನಿಸಿದರು.
ಹೈಕೋರ್ಟ್ ನೋಟಿಸ್ ಬಂದಿಲ್ಲ: ೧೯೮೬-೮೭ರಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರ ಅವರುಗಳು ಅಕ್ರಮವಾಗಿ ಜಮೀನು ಖರೀದಿಸಲಾಗಿದೆ ಎಂದು ಆರೋಪಿಸಿ ಆಗಿನ ಪ್ರಧಾನಮಂತ್ರಿ, ಗೃಹ ಮಂತ್ರಿಯವರಿಗೆ ಪತ್ರ ಬರೆದಿದ್ದರು. ನಾನು ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿದ್ದೇನೆ. ಕಾಂಗ್ರೆಸ್ ಸರ್ಕಾರ ಹಾಗೂ ರಾಜ್ಯದ ಸಂಪತ್ತನ್ನು ರಕ್ಷಿಸುತ್ತಿರುವುದಾಗಿ ಹೇಳಿಕೊಂಡಿರುವ ಹೋರಾಟಗಾರರು ನನ್ನ ವಿರುದ್ಧ ಆರೋಪಿಸುತ್ತಿದ್ದಾರೆ. ಇಲ್ಲಿಯವರೆಗೂ ಹೈಕೋರ್ಟ್ ನಿಂದ ನಾನು ಯಾವುದೇ ನೋಟಿಸ್ ಪಡೆದಿಲ್ಲ ಎಂದು ತಿಳಿಸಿದರು.
ಅಧಿಕಾರಿಗಳು ನನಗೆ ನೋಟಿಸ್ ನೀಡದೆ ಸರ್ವೇ ಮಾಡಲು ಹೊರಟಿರುವ ವಿಷಯ ಗೊತ್ತಾದಾಗ, ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಕರೆ ಮಾಡಿ, ನೋಟಿಸ್ ಕೊಟ್ಟು ಸರ್ವೇ ಮಾಡಿ ಎಂದು ಹೇಳಿದ್ದೆ. ಜಾಗತಿಕ ಮಟ್ಟದ ಭೂಮಪಕರನ್ನು ಕರೆತಂದು ಸರ್ವೇ ಮಾಡಿಸಿಕೊಳ್ಳಿ ಎಂದು ಹೇಳಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.