ಮಂಗಳೂರು (ದಕ್ಷಿಣ ಕನ್ನಡ):ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯಗಳನ್ನು ತೊಳೆದರೆ ತಪ್ಪಿಲ್ಲ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ವಿದ್ಯಾರ್ಥಿಯಾಗಿದ್ದಾಗ ನಾನು ಕೂಡ ಶಾಲೆಯ ಶೌಚಾಲಯವನ್ನು ತೊಳೆದಿದ್ದೇನೆ. ಮಕ್ಕಳ ಶೌಚಾಲಯವನ್ನು ಮಕ್ಕಳೇ ಸ್ವಚ್ಚಗೊಳಿಸಿದರೆ ತಪ್ಪಿಲ್ಲ. ಇದು ಶಿಕ್ಷಣದ ಒಂದು ಭಾಗ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದಲ್ಲಿ ಮಾತನಾಡಿದ ಅವರು, ಶಾಲೆಯ ಶೌಚಾಲಯವನ್ನು ವಿದ್ಯಾರ್ಥಿಗಳಾಗಿದ್ದಾಗ ನಾವೇ ಕ್ಲೀನ್ ಮಾಡುತ್ತಿದ್ದೆವು. ಅದು ಶಿಕ್ಷಣದ ಒಂದು ಭಾಗ. ಮಕ್ಕಳು ಸ್ವಾವಲಂಭಿಗಳಗಬೇಕು ಅಂತಾ ನಮ್ಮ ಮನೆಯಲ್ಲೂ ಕೂಡ ಮಕ್ಕಳಿಗೆ ಅದನ್ನು ಕಲಿಸುತ್ತೇವೆ. ಸ್ವಚ್ಚತೆ ಬಗ್ಗೆ ಅರಿವು ಮೂಡಲು ಕೈಗೆ ಗ್ಲೌಸ್ ಹಾಕಿ ಶೌಚಾಲಯ ಕ್ಲೀನ್ ಮಾಡಿಸಬೇಕು. ಆದರೆ ಒತ್ತಾಯಪೂರ್ವಕವಾಗಿ ಸ್ವಚ್ಚಗೊಳಿಸಬಾರದು.
ವಿದ್ಯಾರ್ಥಿಗಳ ಕೈಯಲ್ಲಿ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ ವಿಚಾರ ಇತ್ತೀಚೆಗೆ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಬೆಂಗಳೂರು, ಶಿವಮೊಗ್ಗ ಮತ್ತು ಕೋಲಾರ ಜಿಲ್ಲೆಗಳಲ್ಲಿ ಶಾಲೆ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಮತ್ತೊಂದೆಡೆ ಶಾಲೆಯಲ್ಲಿ ಸ್ವಚ್ಛ ಮಾಡುವವರಿಲ್ಲ ಎನ್ನುವ ಆರೋಪಗಳು ಶಿಕ್ಷಕರಿಂದ ಬಂದಿವೆ. ಅದಾಗ್ಯೂ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ನಂತರ ಹೊಸ ನಿಯಮವನ್ನೂ ರೂಪಿಸಲಾಗಿತ್ತು. ಇದಕ್ಕೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳು ಕಸ ಗುಡಿಸುವುದರಲ್ಲಿ, ಅಗತ್ಯ ಸಾಧನಗಳನ್ನು ಬಳಸಿಕೊಂಡು ಶೌಚಾಲಯ ಸ್ವಚ್ಛಗೊಳಿಸಿರುವುದರಲ್ಲಿ ತಪ್ಪಿಲ್ಲ. ಇಂಥ ಕೆಲಸಗಳನ್ನು ಚಿಕ್ಕಂದಿನಲ್ಲೇ ತಿಳಿದುಕೊಳ್ಳುವುದು ಉತ್ತಮ ಎಂದು ಮೂಡುಬಿದಿರೆಯಲ್ಲಿ ಯುಟಿ ಖಾದರ್ ಹೇಳಿದ್ದರು.