ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಸ್ಚಚ್ಛಗೊಳಿಸುವ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗುತ್ತಿದೆ. ಈ ಕುರಿತು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.ವಿದ್ಯಾರ್ಥಿಗಳು ಶಾಲೆಗಳಲ್ಲಿ ಶೌಚಾಲಯ ತೊಳೆದರೆ ತಪ್ಪೇನು, ಜಪಾನ್‌ನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ಹೇಳಿದರು ಎಂದು ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಾನು ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ನನ್ನ ವಸತಿ ನಿಲಯವನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದೆ. ಶಿಕ್ಷಕರು ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವೀಡಿಯೊಗಳನ್ನು ನಾನು ನೋಡಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪೊರಕೆ ನೀಡುವುದು ಅಪರಾಧ ಎಂಬಂತೆ ಕಾಣುತ್ತಿದ್ದು, ಇದರಿಂದ ಸ್ವಚ್ಛತೆಯ ಕೆಲಸ ಕೀಳು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿದೆ. ಬದಲಾಗಿ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ತಿಳಿಹೇಳುವುದು ಅವಶ್ಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಕೆಲ ಎಚ್ಚರಿಕೆಗಳನ್ನು ಬಳಸಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದರಲ್ಲಿ ತಪ್ಪೇನಿಲ್ಲ. ಯಾವುದೇ ತಾರತಮ್ಯವಿಲ್ಲದೆ ಎಲ್ಲ ವಿದ್ಯಾರ್ಥಿಗಳು ಸ್ವಚ್ಛತೆಯಲ್ಲಿ ತೊಡಗಬೇಕು ಎಂದರು.