Friday, January 2, 2026
Google search engine

Homeದೇಶನೀರು ಇರ್ಲಿಲ್ಲ ಅಂತ ವಿಷ ಕೊಟ್ಟಿದ್ದಾರೆ : ಮೋದಿ ವಿರುದ್ಧ ರಾಹುಲ್‌ ಗಾಂಧಿ ಕಿಡಿ

ನೀರು ಇರ್ಲಿಲ್ಲ ಅಂತ ವಿಷ ಕೊಟ್ಟಿದ್ದಾರೆ : ಮೋದಿ ವಿರುದ್ಧ ರಾಹುಲ್‌ ಗಾಂಧಿ ಕಿಡಿ

ನವದೆಹಲಿ : ಇಂದೋರ್‌ನಲ್ಲಿ ನೀರು ಇರಲಿಲ್ಲ ಹಾಗಾಗಿ ಕುಡಿಯೋಕೆ ವಿಷ ಹಂಚಲಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ತೀವ್ರ ಆಕ್ರೋಶ ಹೊರಹಾಕಿದ್ದು, ದೇಶದ ನಂ.1 ಸ್ವಚ್ಛ ನಗರಿ ಆಗಿರುವ ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ 14 ಮಂದಿ ಸಾವನ್ನಪ್ಪಿದ್ದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಆಡಳಿತಾರೂಢ ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದು, ಬಿಜೆಪಿ ಆಡಳಿತ ಗಾಢ ನಿದ್ರೆಯಲ್ಲಿದೆ. ಇಂದೋರ್‌ನಲ್ಲಿ ನೀರು ಇರಲಿಲ್ಲ, ಆದ್ದರಿಂದ ವಿಷ ಹಂಚಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈಗ ಅಲ್ಲಿನ ಪ್ರತಿ ಮನೆಯಲ್ಲೂ ಶೋಕ ಮಡುಗಟ್ಟಿದ್ದು, ಬಡವರು ಅಸಹಾಯಕರಾಗಿದ್ದಾರೆ. ಆದರೆ ಬಿಜೆಪಿ ನಾಯಕರು ದುರಹಂಕಾರದ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಮನೆ ದೀಪ ಆರಿಹೋದವರಿಗೆ ಸಾಂತ್ವನ ಹೇಳುವುದನ್ನ ಬಿಟ್ಟು, ಧಿಮಾಕಿನ ಹೇಳಿಕೆಗಳನ್ನ ನೀಡುತ್ತಿದೆ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಕಲುಷಿತ ಹಾಗೂ ದುರ್ವಾಸನೆ ಬೀರುವ ನೀರಿನ ಬಗ್ಗೆ ಜನರು ಪದೇ ಪದೇ ದೂರು ನೀಡುತ್ತಾ ಬಂದಿದ್ದರು. ಆದರೆ ಸರ್ಕಾರ ಅವರ ದೂರುಗಳನ್ನ ಏಕೆ ಆಲಿಸಿಲ್ಲ? ಕುಡಿಯೋ ನೀರಿನೊಂದಿಗೆ ಕೊಳಚೆ ನೀರು ಹೇಗೆ ಬೆರೆತುಹೋಯಿತು? ಸಕಾಲದಲ್ಲಿ ಏಕೆ ನೀರು ಸರಬರಾಜು ಮಾಡಲಿಲ್ಲ? ಜವಾಬ್ದಾರಿಯುತ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಕ್ರಮ ಕೈಗೊಳ್ಳೋದು ಯಾವಾಗ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇವು ಕ್ಷುಲ್ಲಕ ಪ್ರಶ್ನೆಗಳಲ್ಲ, ಪ್ರತಿಯೊಬ್ಬರ ಹೊಣೆಗಾರಿಕೆಯನ್ನು ಸೂಚಿಸುತ್ತದೆ.

ಶುದ್ಧ ನೀರು ಪೂರೈಕೆ ಔದಾರ್ಯವಲ್ಲ, ಅದು ಬದುಕುವ ಹಕ್ಕು. ಆದರೆ ಬಿಜೆಪಿ ಡಬಲ್ ಎಂಜಿನ್‌ ಸರ್ಕಾರದ ನಿರ್ಲಕ್ಷ್ಯ ಆಡಳಿತ ಜನರ ಹಕ್ಕುಗಳನ್ನ ಸಂಪೂರ್ಣ ನಾಶಪಡಿಸಿದೆ. ಮಧ್ಯಪ್ರದೇಶ ಈಗ ದುರಾಡಳಿತದ ಕೇಂದ್ರಬಿಂದುವಾಗಿದ್ದು, ಕೆಮ್ಮಿನ ಸಿರಪ್‌ನಿಂದ ಸಾವುಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಇಲಿಗಳಿಂದ ಮಕ್ಕಳ ಸಾವು, ಈಗ ಒಳಚರಂಡಿ ಕಲುಷಿತ ನೀರು ಕುಡಿದು ಸಾವು ಸಂಭವಿಸಿದೆ. ಬಡವರು ಸತ್ತಾಗಲೆಲ್ಲಾ ಮೋದಿ ಮೌನವಾಗಿರುತ್ತಾರೆ ಎಂದು ಕುಟುಕಿದ್ದಾರೆ.

ಇದೀಗ ಇಂದೋರ್‌ನ ಭಾಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, 200 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 1,400ಕ್ಕೂ ಅಧಿಕ ಜನರು ವಾಂತಿ, ಭೇದಿಯಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರವೆಂದು ಖ್ಯಾತಿ ಪಡೆದಿದೆ. ಈಗ ಅದೇ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಜನ ಸಾವನ್ನಪ್ಪುತ್ತಿದ್ದ ಚರ್ಚೆಗೆ ಗ್ರಾಸವಾಗಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಯೋಗಾಲಯದಲ್ಲಿ ನೀರಿನ ಪರೀಕ್ಷೆ ನಡೆದಿದ್ದು, ಕಲುಷಿತ ನೀರಿನಿಂದಾಗಿ ಜನರು ಅಸ್ವಸ್ಥರಾಗುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ. ಒಬ್ಬ ಅಧಿಕಾರಿಯನ್ನ ಕೆಲಸದಿಂದಲೇ ವಜಾಗೊಳಿಸಲಾಗಿದೆ. ಮೂವರು ಸದಸ್ಯರ ಸಮಿತಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಈ ಮಧ್ಯೆ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ. 

RELATED ARTICLES
- Advertisment -
Google search engine

Most Popular