ಮಂಡ್ಯ: ಸರಗಳ್ಳರು ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದು, ಒಬ್ಬಂಟಿಯಾಗಿ ಓಡಾಡುವ ಮಹಿಳೆಯರೇ ಎಚ್ಚರವಹಿಸಿ ಎಂದು ಮಂಡ್ಯ ಎಸ್ಪಿ ಎನ್.ಯತೀಶ್ ಮನವಿ ಮಾಡಿದ್ದಾರೆ.
ಸಕ್ಕರೆನಾಡು ಮಂಡ್ಯದಲ್ಲಿ ಸರಗಳ್ಳರ ತಂಡ ಕ್ರಿಯಾಶೀಲಾಗಿದ್ದು, ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡ್ತಿದ್ದಾರೆ.
ಒಂದೇ ದಿನ ಎರಡು ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದ್ದ ಕಾರಣದಿಂದಾಗಿ ಬೆಸಗರಹಳ್ಳಿ ಪೊಲೀಸರು ಒಂಟಿಯಾಗಿ ಮಹಿಳೆಯರು ಓಡಾಡದಂತೆ ಪ್ರಕಟಣೆ ಹೊರಡಿಸಿದ್ದಾರೆ.
ಜುಲೈ29 ರಂದು ಶಿವಳ್ಳಿ ಹಾಗೂ ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣಗಳು ನಡೆದಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಚಿನ್ನಾಭರಣ ಧರಿಸಿ ಒಂಟಿಯಾಗಿ ಓಡಾಡದಂತೆ ಮಹಿಳೆಯರಿಗೆ ಮನವಿ ಮಾಡಿದೆ.
ಜಮೀನು, ಕಾಲುವೆಗೆ ಹೋಗುವ ಹಾಗೂ ದಾನ ಮೇಯಿಸುವ, ವಾಯುವಿಹಾರಕ್ಕೆ ಹೋಗುವ ಮಹಿಳೆಯರೇ ಸರಗಳ್ಳರ ಟಾರ್ಗೆಟ್ ಆಗಿದ್ದು, ಬೈಕ್ ನಲ್ಲಿ ಬಂದು ಕ್ಷಣಾರ್ಧದಲ್ಲಿ ಸರ ಕಿತ್ತುಕೊಂಡು ಪರಾರಿಯಾಗುತ್ತಾರೆ.
ಚಾಕು ತೋರಿಸಿ ಮಾಂಗಲ್ಯ ಸರ ಎಗರಿಸಿದ ಕಳ್ಳರು
ಮದ್ದೂರು ತಾಲ್ಲೂಕಿನ ರಾಂಪುರ ಗ್ರಾಮದ ಸುಧಾ ಎಂಬ ಮಹಿಳೆ ಜಮೀನಿನಲ್ಲಿ ಬಳಿ ಬಟ್ಟೆ ಒಗೆಯುವ ವೇಳೆ ಚಾಕು ತೋರಿಸಿ ಮಾಂಗಲ್ಯ ಸರ ಎಗರಿಸಿದ್ದ ಹಿನ್ನಲೆ ಮಂಡ್ಯ ಎಸ್ಪಿ ಎನ್.ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಿಳೆಯಿಂದ ಘಟನೆಯ ಮಾಹಿತಿಯನ್ನು ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಒಬ್ಬಂಟಿ ಮಹಿಳೆಯರನ್ನು ಸರಗಳ್ಳರು ಟಾರ್ಗೆಟ್ ಮಾಡ್ತಿದ್ದಾರೆ. ಮಹಿಳೆಯರು ಎಚ್ಚರಿಕೆ ವಹಿಸಿ ಒಂಟಿಯಾಗಿ ಓಡಾಡಬೇಡಿ. ಅನುಮಾನಸ್ಪದವಾಗಿ ಯಾರಾದರೂ ಕಂಡು ಬಂದರೆ 112 ಗೆ ಕರೆ ಮಾಡಿ ಎಂದು ತಿಳಿಸಿದ್ದಾರೆ.