ಪಿರಿಯಾಪಟ್ಟಣ:ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ತೊಂದರೆಗೊಳಗಾಗಿರುವ ರೈತರಿಗೆ ನೆರವಾಗಲು ಕರ್ನಾಟಕ ಹಾಲು ಮಹಾಮಂಡಳಿಯಿಂದ ರೈತರಿಂದ ನೆರವಾಗಿ ಮೆಕ್ಕೆಜೋಳ ಖರೀದಿ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಪ್ರತಿ ಕ್ವಿಂಟಾಲ್ ಮೆಕ್ಕೆಜೋಳವನ್ನು 2250 ರೂ.ಗಳ ದರದಲ್ಲಿ ಖರೀದಿ ಮಾಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಎಫ್ ರೈತರಿಂದ ಮೆಕ್ಕೆಜೋಳ ಖರೀದಿಸಲು ಆರ್ಥಿಕ ವಿನಾಯ್ತಿಯನ್ನು ನೀಡಲಾಗಿದೆ. ಖರೀದಿ ಪ್ರಕ್ರಿಯೆಯನ್ನು ಈ ತಿಂಗಳ 13 ರಿಂದ ಪ್ರಾರಂಭಿಸಲಾಗುವುದು ಎಂದರು. ಮೆಕ್ಕೆಜೋಳ ಖರೀದಿಗೆ ರೈತರು ಸರ್ಕಾರದ ಕೃಷಿ ಇಲಾಖೆಯಡಿ ಬರುವ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಣಿಯಾಗಿರುವ ಸಂಸ್ಥೆಯೊಂದಿಗೆ ಹಾಲಿನ ಸಂಘಕ್ಕೆ ಭೇಟಿ ನೀಡಿ ಮೆಕ್ಕೆಜೋಳ ಸರಬರಾಜು ಮಾಡಲು ನೋಂದಾಯಿಸಿಕೊಂಡು ಮೆಕ್ಕೆಜೋಳ ಪಡೆಯಬೇಕು. ಫ್ರೂಟ್ಸ್ ನೋಂದಾಣಿಗೆ ತೊಂದರೆಯಾಗಿದ್ದರೆ ಹತ್ತಿರದ ರೈತ ಸೇವಾ ಕೇಂದ್ರಗಳಿಗೆ ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ. ನೋಂದಣಿ ನಂತರ ನೋಂದಣಿ ದೃಢೀಕರಿಸಲು ರೈತರು ಮೆಕ್ಕೆಜೋಳವನ್ನು ಹಾಲು ಒಕ್ಕೂಟದ ಮೂಲಕ ಪಶು ಆಹಾರ ಘಟಕಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಕೆಎಂಎಫ್ ಬೆಂಗಳೂರಿನ ರಾಜಾನಕುಂಟೆ, ತುಮಕೂರಿನ ಗುಬ್ಬಿ, ಧಾರವಾಡ, ಹಾಸನ ಹಾಗೂ ಶಿಕಾರಿ ಪುರದಲ್ಲಿ ಪಶು ಆಹಾರ ಘಟಕಗಳನ್ನು ಹೊಂದಿದೆ ಎಂದರು. ರೈತರು ಹಾಲು ಮಹಾಮಂಡಳಿ ಆರಂಭಿಸುವ ಖರೀದಿ ಕೇಂದ್ರದಲ್ಲೇ ಮೆಕ್ಕೆಜೋಳವನ್ನು ಮಾರಾಟ ಮಾಡಬೇಕು ಎಂದು ಅವರು ಹೇಳಿದರು.
ಹಾಲಿನ ದರ ಏರಿಕೆ ಇಲ್ಲ ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡುವ ಯಾವುದೇ ಚಿಂತನೆ ಸರ್ಕಾರಕ್ಕಿಲ್ಲ. ಇಂದಿನ ಸಭೆಯಲ್ಲಿ ಹಾಲು ಒಕ್ಕೂಟದವರು ನಮಗೆ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ನಮಗೆ ರೈತರು, ಗ್ರಾಹರಕರ ಹಿತ ಮುಖ್ಯ ಹಾಗಾಗಿ ಹಾಲಿನ ದರ ಏರಿಕೆ ತೀರ್ಮಾನ ಮಾಡಿಲ್ಲ ಎಂದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಆದರೂ ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಾಲಿನ ದರ ಏರಿಸುವ ಚಿಂತನೆ ಇಲ್ಲ ಎಂದರು. ರಾಜ್ಯದಲ್ಲಿ ಹಾಲಿನ ಕೊರತೆ ಇಲ್ಲ. ಸಾಕಷ್ಟು ಹಾಲು ಉತ್ಪಾದನೆಯಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಚುನಾವಣೆಗೆ ಅಭ್ಯರ್ಥಿ ಅಲ್ಲ ಮುಂದಿನ ಲೋಕಸಭಾ ಚುನಾವಣೆಗೆ ನಾನು ಅಭ್ಯರ್ಥಿ ಅಲ್ಲ. ಸುಮ್ಮೆನೆ ಸುದ್ದಿಗಳನ್ನು ಹುಟ್ಟು ಹಾಕುವುದು ಬೇಡೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸ್ಪಷ್ಟಪಡಿಸಿದರು.