ವರದಿ :ಸ್ಟೀಫನ್ ಜೇಮ್ಸ್.
ಮೂಡಲಗಿ – ರೈತ ಯಾವುದೇ ಜಾತಿ, ಪಕ್ಷಕ್ಕೆ ಸೇರಿದವನಲ್ಲ. ಅನ್ನದಾತ ನ್ಯಾಯಕ್ಕಾಗಿ ಹೋರಾಟ ಮಾಡುವಾಗ ನಾವು ನಿಮ್ಮೆಲ್ಲರ ಬೆಂಬಲಕ್ಕೆ ನಿಲ್ಲುತ್ತೇವೆ. ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ ಕಾರ್ಖಾನೆ ಆರಂಭಕ್ಕೆ ಮೊದಲೇ ಯಡಿಯೂರಪ್ಪ ನವರು ತಕ್ಷಣವೇ ಮಾತುಕತೆ ಆರಂಭಿಸಿ ಪರಿಹಾರ ಕೊಡಿಸಿದ್ದರು. ಆದರೆ ಹೋರಾಟ ಆರಂಭಿಸಿ ಆರು ದಿನಗಳಾದರೂ ಉಸ್ತುವಾರಿ ಸಚಿವರು, ಸಕ್ಕರೆ ಆಯುಕ್ತರು ಯಾರೂ ಇನ್ನೂ ಇಲ್ಲಿಗೆ ಬರದೇ ಇರುವುದು ವಿಷಾದಕರ. ಈ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಗುರ್ಲಾಪೂರ ಕ್ರಾಸ್ ನಲ್ಲಿ ಕಳೆದ ಆರು ದಿನಗಳಿಂದ ಕಬ್ಬಿನ ಬೆಲೆ ನಿಗದಿಗೆ ಕಳೆದ ಆರುದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ಈಗ ಗುರ್ಲಾಪೂರ ಕ್ರಾಸ್ ಅಷ್ಟೇ ಅಲ್ಲದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ದರ ನಿಗದಿಗಾಗಿ ಹೋರಾಟ ಆರು ದಿನಗಳಿಂದ ನಡೆದಿದ್ದರೂ ಯಾರೂ ಬಂದಿಲ್ಲ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲವಾಗಿದೆ. ಇಂದು ಸಂಜೆಯ ಒಳಗೆ ಉಸ್ತುವಾರಿ ಸಚಿವರು ಇಲ್ಲಿಗೆ ಬರಬೇಕು ನಾಳೆಯೊಳಗೆ ಈ ಸಮಸ್ಯೆಯನ್ನು ಸರ್ಕಾರ ಪರಿಹರಿಸಬೇಕು. ಇಲ್ಲದಿದ್ದರೆ ಮುಂದಿನ ಉಗ್ರ ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ. ನಾಳೆ ನನ್ನ ಜನ್ಮ ದಿನವನ್ನು ರೈತರೊಂದಿಗೇ ಆಚರಿಸುತ್ತೇನೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ಕಬ್ಬು ಬೆಳೆಯಲು ಆರಂಭ ಆದಾಗಿನಿಂದಲೂ ಕಾರ್ಖಾನೆಯವರು ರೈತರಿಗೆ ಮೋಸ ಮಾಡುತ್ತಿದ್ದಾರೆ. ರೈತರು ಜಾಗೃತರಾಗಬೇಕಾಗಿದೆ. ನಾವು ನ್ಯಾಯವಾದ ದರವನ್ನು ನಮ್ಮ ಬೆಳೆಗೆ ಕೇಳುತ್ತಿದ್ದೇವೆ ರೈತರ ಉತ್ಪನ್ನದಿಂದಲೇ ಶ್ರೀಮಂತರಾಗುವ ಉದ್ಯಮಿಗಳು ನಮ್ಮ ಬೇಡಿಕೆಯ ದರವನ್ನು ನೀಡಲೇಬೇಕು ಎಂದು ಆಗ್ರಹಿಸಿದರು.
ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿ, ಹೋರಾಟಕ್ಕೆ ಬೆಂಬಲ ನೀಡಿದ ಮುಖಂಡರಿಗೆ ಮೂರು ಬೇಡಿಕೆಗಳನ್ನು ಇಡುವುದಾಗಿ ಹೇಳಿ ಅವರೆಲ್ಲರ ಬೆಂಬಲವನ್ನು ಕೋರಿದರು. ಬೇಡಿಕೆಗಳೆಂದರೆ, ಒಂದು, ಈ ಸಲ ಬೆಳಗಾವಿ ಅಧಿವೇಶನಲ್ಲಿ ಹತ್ತು ಲಕ್ಷ ಜನರೊಂದಿಗೆ ಹೆದ್ದಾರಿ ಬಂದ್ ಮಾಡಿ ನಮ್ಮ ಬೇಡಿಕೆಗಳಿಗೆ ಆಗ್ರಹಿಸುತ್ತೇವೆ ಎರಡು, ಅಧಿವೇಶನದಲ್ಲಿ ತಾವು ಮಾತನಾಡುವಾಗ ಕಬ್ಬಿಗೆ ರೂ. ೪೫೦೦ ದರ ನಿಗದಿ ಮಾಡಲು ಸಭಾಧ್ಯಕ್ಷರಿಗೆ ಒತ್ತಾಯಿಸಬೇಕು ಹಾಗೂ ೬೦ ವರ್ಷ ವಯಸ್ಸಾದ ನಂತರ ನೌಕರರಿಗೆ ಹೇಗೆ ಪಿಂಚಣಿ ಬರುತ್ತದೆಯೋ ಅದೇ ರೀತಿ ೬೦ ವರ್ಷ ಪೂರೈಸಿದ ರೈತರ ಕುಟುಂಬಕ್ಕೆ ತಿಂಗಳಿಗೆ ಹತ್ತು ಸಾವಿರ ಸರ್ಕಾರ ಕೊಡುವಂತೆ ಆಗ್ರಹಿಸಬೇಕು ಎಂದರು
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ಸಂಸದ ಈರಣ್ಣ ಕಡಾಡಿ, ಶಾಸಕ ಪಿ ರಾಜೀವ, ವಿಶ್ವನಾಥ ಪಾಟೀಲ, ಶಾಸಕ ಧುರ್ಯೋಧನ ಐಹೊಳೆ ಉಪಸ್ಥಿತರಿದ್ದು ರೈತರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.



