ರಾಮನಗರ: ಭಾರತವು ಜಾತ್ಯಾತೀತ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ, ಜಾತಿಗಣತಿಗೆ (Caste Census) ಯಾವುದೇ ಮಹತ್ವವಿಲ್ಲ ಎಂಬ ಅಭಿಪ್ರಾಯವನ್ನು ಸಂಸದ ಡಾ. ಮಂಜುನಾಥ್ ವ್ಯಕ್ತಪಡಿಸಿದ್ದಾರೆ. ರಾಮನಗರದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಮ್ಮ ಸಂವಿಧಾನವೇ ಜಾತಿ ವ್ಯವಸ್ಥೆಯನ್ನು ತಿರಸ್ಕರಿಸುತ್ತದೆ. ಅಂಬೇಡ್ಕರ್ vision ಸ್ಪಷ್ಟವಾಗಿದೆ — ಸಮಾನತೆ, ಬಾಂಧವ್ಯ ಮತ್ತು ಜಾತ್ಯಾತೀತತೆ. ಇಂತಹ ಸಂದರ್ಭದಲ್ಲಿ ಮತ್ತೆ ಜಾತಿಗಣತಿ ತರಬೇಕು ಎಂಬುದು ವಿವೇಕಹೀನ ನಿಲುವಾಗಿದೆ,” ಎಂದು ಅವರು ತಿಳಿಸಿದರು.
ಡಾ. ಮಂಜುನಾಥ್ ಅವರು ಮುಂದಾಗಿ, “ಸಾಮಾಜಿಕ ಹಾಗೂ ಶೈಕ್ಷಣಿಕ ಹಿನ್ನಲೆಯಲ್ಲಿ ಸಮೀಕ್ಷೆ ನಡೆಸುವುದು ಒಳ್ಳೆಯದು. ಆದರೆ ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸುವ ಪ್ರಯತ್ನ ಸಮಾಜದಲ್ಲಿ ಭಿನ್ನತೆ ಉಂಟುಮಾಡಬಹುದು. ಎಲ್ಲ ಜಾತಿಗಳಲ್ಲಿಯೂ ಬಡವರು ಇದ್ದಾರೆ. ಸಮಾಜದ ಎಲ್ಲ ವರ್ಗಗಳನ್ನೂ ಮೇಲೆತ್ತುವ ಯತ್ನವಾಗಬೇಕು,” ಎಂದು ಹೇಳಿದರು.
ಜಾತಿಗಣತಿ ವರದಿ ಸ್ವೀಕಾರದ ಬಗ್ಗೆ ಸರ್ಕಾರ ತೋರಿಸುತ್ತಿರುವ ಆತುರವನ್ನು ಅವರು ಪ್ರಶ್ನಿಸಿದರು. “ಈ ರೀತಿಯ ಮಹತ್ವದ ನಿರ್ಧಾರಗಳು ತಜ್ಞರ ಸಲಹೆ, ಚಿಂತಕರು ಮತ್ತು ಸಾರ್ವಜನಿಕರ ಅಭಿಪ್ರಾಯದ ಆಧಾರದಲ್ಲಿ ನಡೆಯಬೇಕು. ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ವಿಸ್ತೃತ ಚರ್ಚೆಗಳು ನಡೆಯಬೇಕು. ಅಗತ್ಯವಿದ್ದರೆ ಶಾಸಕರ ಸಮಿತಿಯನ್ನು ರಚಿಸಿ, ಸಂಪೂರ್ಣ ಅಧ್ಯಯನ ಮಾಡಿದ ಬಳಿಕ ಮಾತ್ರ ನಿರ್ಧಾರಕ್ಕೆ ಬರಬೇಕು,” ಎಂದು ಅವರು ಸಲಹೆ ನೀಡಿದರು.