ಬೆಂಗಳೂರು: ನ್ಯಾಯಾಂಗದಲ್ಲಿ ಕನ್ನಡ ಜಾರಿಗೆ ಬರಬೇಕು ಎಂಬ ಬೇಡಿಕೆಗೆ ಬಲ ಕೊಡುವಂತಹ ಮತ್ತೊಂದು ನಿದರ್ಶನಕ್ಕೆ ಕರ್ನಾಟಕ ಹೈಕೋರ್ಟ್ ಸಾಕ್ಷಿಯಾಗಿದ್ದು, ನ್ಯಾ| ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ| ಸಿ.ಎಂ. ಜೋಷಿ ಅವರಿದ್ದ ವಿಭಾಗೀಯ ನ್ಯಾಯಪೀಠವು ಪ್ರಕರಣವೊಂದರ ತೀರ್ಪನ್ನು ಇದೇ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ಪ್ರಕಟಿಸಿದೆ. ಈ ಮೂಲಕ ಕನ್ನಡ ಭಾಷೆಯ ಕುರಿತು ಬದ್ಧತೆಯನ್ನು ಪ್ರದರ್ಶಿಸಿದೆ.
ಈ ಹಿಂದೆ 2008ರಲ್ಲಿ ನ್ಯಾ| ಅರಳಿ ನಾಗರಾಜ್ ಅವರು ಕನ್ನಡದಲ್ಲಿ ತೀರ್ಪು ಬರೆದಿದ್ದರು. ಅದು ಹೈಕೋರ್ಟ್‌ನಲ್ಲಿ ಮೊದಲ ಕನ್ನಡ ಆದೇಶವಾಗಿತ್ತು. ಆದರೆ ವಿಭಾಗೀಯ ನ್ಯಾಯಪೀಠವೊಂದು ಕನ್ನಡದಲ್ಲಿ ತೀರ್ಪು ನೀಡಿದ್ದು ಇದೇ ಮೊದಲು.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಪಟ್ಟನಾಯಕನ ಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿಯವರು ಭಾರತೀಯ ಉತ್ತರಾಧಿಕಾರ ಕಾಯ್ದೆ-1925ರ ಸೆಕ್ಷನ್ 273 ಅಡಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ವಿಭಾಗೀಯ ನ್ಯಾಯಪೀಠ ಕನ್ನಡದಲ್ಲಿ ತೀರ್ಪು ಪ್ರಕಟಿಸಿದೆ. ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ಗುರುವಾರ ಪ್ರಕಟಿಸಿದ ನ್ಯಾ| ದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠವು ಮೇಲ್ಮನವಿಯನ್ನು ಪುರಸ್ಕರಿಸಿ ಆದೇಶಿಸಿದೆ. ವಿಶೇಷವೆಂದರೆ ಇಂಗ್ಲಿಷ್ ಭಾಷೆಯ ತೀರ್ಪನ್ನು ಕನ್ನಡಕ್ಕೆ ಅನುವಾದಿಸಲಾಗಿಲ್ಲ; ಬದಲಿಗೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಪ್ರತ್ಯೇಕವಾಗಿ ತೀರ್ಪು ಬರೆಯಲಾಗಿದೆ.
ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆ ತೀರ್ಪು ಓದುವುದಕ್ಕಿಂತ ಮೊದಲು, “ಬುಧವಾರ (ಡಿ. 11) ಭಾರತೀಯ ಭಾಷಾ ದಿನ ಇತ್ತು. ಆದರೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ರಜೆ ಇತ್ತು. ಹಾಗಾಗಿ ಇವತ್ತು ಕನ್ನಡದಲ್ಲಿ ಆದೇಶ ನೀಡುತ್ತಿದ್ದೇವೆ. ಭಾರತದ ಭಾಷೆ ಗಳಿಗೆ ಮಾನ್ಯತೆ ನೀಡುವುದೇ ಭಾರತ ಭಾಷಾ ದಿನದ ಉದ್ದೇಶ. ಆ ಹಿನ್ನೆಲೆಯಲ್ಲಿ ಈ ಪ್ರಯತ್ನ ನಮ್ಮದು. ಪ್ರಕರಣಕ್ಕೆ ಸಂಬಂಧಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ನಾವೇ ಎರಡು ಆದೇಶ ಬರೆದಿದ್ದೇವೆ. ಇದು ತರ್ಜುಮೆಯಲ್ಲ. ಕವಿ ರವೀಂದ್ರನಾಥ್ ಠಾಗೋರ್ ಅವರು ಹೇಗೆ ಬಂಗಾಲಿ ಮತ್ತು ಇಂಗ್ಲಿಷ್‌ನಲ್ಲಿ ಕವಿತೆ ಬರೆಯುತ್ತಿದ್ದರೋ ಹಾಗೆ’ ಎಂದು ನ್ಯಾ| ದೀಕ್ಷಿತ್ ವಿವರಿಸಿದರು.
ನಾವು ಹೊಸ ಪ್ರವೃತ್ತಿಯನ್ನು ಪ್ರಚಲಿತಕ್ಕೆ ತರಲು (ಟ್ರೆಂಡ್ ಸೆಟ್) ನಿರ್ಧರಿಸಿ ದ್ದೇವೆ. ಈಗ ನಮ್ಮೆಲ್ಲ ತೀರ್ಪುಗಳನ್ನು ಇಂಗ್ಲಿಷ್ ಭಾಷೆಯಲ್ಲಿ ನೀಡುತ್ತಿದ್ದೇವೆ. ಹೀಗೆ ಮಾಡಿದರೆ ಜನಸಾಮಾನ್ಯರಿಗೆ ಅರ್ಥವಾಗುವುದು ಹೇಗೆ? ಇಂಗ್ಲೆಂಡ್‌ನಲ್ಲಿ 1730ರವರೆಗೆ ಲ್ಯಾಟಿನ್ ಭಾಷೆಯಲ್ಲಿ ನ್ಯಾಯಾಲಯದ ಕಲಾಪ ನಡೆಯುತ್ತಿತ್ತು. ಹೀಗಾಗಿ ಇಂಗ್ಲೆಂಡ್ ನ್ಯಾಯಾಲಯದ ಆದೇಶ/ತೀರ್ಪು ಸ್ಥಳೀಯ ಭಾಷೆಯಲ್ಲಿ ನೀಡಬೇಕು ಎಂದು ಶಾಸನ ರೂಪಿಸಿದ್ದರು. ಅದರಂತೆ 1730ರಿಂದ ಇಂಗ್ಲೆಂಡ್‌ನಲ್ಲಿ ಇಂದಿನವರೆಗೆ ಆಂಗ್ಲ ಭಾಷೆಯಲ್ಲಿಯೇ ಕಲಾಪ ನಡೆಯುತ್ತಿದೆ ಎಂದರು.
ಎಲ್ಲರಿಗೂ ತಿಳಿಯಬೇಕು ಎನ್ನುವ ಉದ್ದೇಶದಿಂದ ಹಾಗೆ ಮಾಡಲಾಗಿದೆ. ಆದರೆ ನಮ್ಮಲ್ಲಿ ಕೇಶವಾನಂದ ಭಾರತಿ ತೀರ್ಪು ನಮಗೇ ತಿಳಿಯುವುದಿಲ್ಲ. ವಕೀಲರಿಗೆ ತಿಳಿಯಬಹುದೇನೋ? ಆದೇಶದ ಸಕಾರಣಗಳನ್ನು ಒಳಗೊಂಡ ಭಾಗ ತಿಳಿಯಲಿ, ಬಿಡಲಿ, ಸಾರಾಂಶ ಭಾಗವನ್ನಾದರೂ ಕನ್ನಡದಲ್ಲಿ ನೀಡಬೇಕು. ಆಗ ದಾವೆದಾರರಿಗೆ ತೀರ್ಪು ಅರ್ಥವಾಗುತ್ತದೆ ಎಂದು ಕನ್ನಡ ತೀರ್ಪನ್ನು ಸಮರ್ಥಿಸಿದರು.
ಕನ್ನಡದಲ್ಲಿ ತೀರ್ಪು ಬರೆಯಲು ಕಾರಣ
ಸಂವಿಧಾನದ 348ನೇ ವಿಧಿಯ ಪ್ರಕಾರ ಇಂಗ್ಲಿಷ್ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಭಾಷೆಯಾಗಿದೆ. ಆದರೆ ಅಲ್ಲಿ ಇಂಗ್ಲಿಷ್ ಮಾತ್ರ ಎಂದು ಹೇಳಿಲ್ಲ. 348(1)ನೇ ವಿಧಿಯ ಅಡಿ ಸರಕಾರವು ರಾಷ್ಟ್ರಪತಿಗಳಿಂದ ಅನುಮತಿ ಪಡೆದು ರಾಜ್ಯಪಾಲರ ಮೂಲಕ ಕಾನೂನು ಮಾಡಬಹುದು ಎಂದು ಹೇಳಿದೆ. ಸಂಬಂಧ ಪಟ್ಟವರು ಅದರ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ ಅವರ್ಯಾರೂ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ನಾವು ಕಾದು ಕುಳಿತುಕೊಳ್ಳಲು ಸಾಧ್ಯವಿಲ್ಲ. ಕನ್ನಡದಲ್ಲಿ ತೀರ್ಪು ಬರುವುದು ಆರಂಭವಾಗಬೇಕು. ಅದಕ್ಕಾಗಿ ನಾವು ಅದನ್ನು ಆರಂಭಿಸಿದ್ದೇವೆ ಎಂದರು.
ಕನ್ನಡ ಅವಸಾನ ಆಗಬಾರದು ಎಂದಾದರೆ ಕನ್ನಡ ಭಾಷೆಗೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು.
-ನ್ಯಾ| ಕೃಷ್ಣ ಎಸ್. ದೀಕ್ಷಿತ್