ಮೈಸೂರು ಚಲೋಗೆ ಸೆಡ್ಡು: ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ
ಮೈಸೂರು: ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಪ್ರತಿಪಕ್ಷಗಳಾದ ಬಿಜೆಪಿ – ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಗೆ ಪ್ರತಿಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನಾಂದೋಲನ ಕಾರ್ಯಕ್ರಮ ನಡೆಯುತ್ತಿದೆ. ಜೊತೆಗೆ, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಹಾಗೂ ಕೇಂದ್ರದ ಮಲತಾಯಿ ದೋರಣೆ ವಿರುದ್ಧ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೈಸೂರಿನಲ್ಲಿ ನಡೆಯುತ್ತಿರುವ ಜನಾಂದೋಲನ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಜೆಡಿಎಸ್-ಬಿಜೆಪಿ ನಾಯಕರ ವಿರುದ್ದ ಗುಡುಗಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನ ಬೃಹತ್ ವೇದಿಕೆಯಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಭಾಷಣ ಮಾಡಿ ದೋಸ್ತಿ ಪಕ್ಷಗಳ ಪಾದಯಾತ್ರೆ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್, ಹೇ ಅಶೋಕ, ಹೇ ಕುಮಾರಸ್ವಾಮಿ ನಿಮಗೆ ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಬೇಕಾ? ಈ ಬಂಡೆ ಸಿದ್ದರಾಮಯ್ಯ ಜೊತೆ ಇದೆ. ಸಿಎಂ ಸಿದ್ದರಾಮಯ್ಯ ಕಾವಲಿಗೆ ಸದಾ ಇರುತ್ತೆ. ಈ ಜನ್ಮದಲ್ಲಿ ನಿಮಗೆ ಏನೂ ಮಾಡೋಕೆ ಆಗೋದಿಲ್ಲ ಎಂದರು.
ಅಂದು ಬ್ರಿಟಿಷರ ವಿರುದ್ಧ ನಾವು ಹೋರಾಟ ಮಾಡಿದ್ದವು. ಇದೇ 9 ನೇ ತಾರೀಕು ಬಳ್ಳಾರಿ ಪಾದಯಾತ್ರೆ ಮಾಡಿದ್ವಿ. ಕ್ವಿಟ್ ಇಂಡಿಯಾ ಮೂಮೆಂಟ್ ದಿನ ಬಳ್ಳಾರಿಯಲ್ಲಿ ಗಣಿ, ಕಳ್ಳರ ವಿರುದ್ಧ ಸಮಾವೇಶ ಮಾಡಿದ್ದವು. ಇಂದು ಬಿಜೆಪಿ ಎನ್ ಡಿ ಎ ವಿರುದ್ಧ, ಬಡವರಿಗಾಗಿ, ಐದು ಗ್ಯಾರಂಟಿ ಉಳಿವಿಗಾಗಿ, ಹಾಗೂ ನಮ್ಮ ವಿರುದ್ದ ಮಾಡುತ್ತಿರುವ ಹೋರಾಟ ನಿಲ್ಲಿಸೋಕೆ ಇಂದು ಹೋರಾಟ. ಜೆಡಿಎಸ್-ಬಿಜೆಪಿ ಪಾದಯಾತ್ರೆ, ಪಾದಯಾತ್ರೆ ಅಲ್ಲ, ಇದೊಂದು ಪಾಪ ವಿಮೋಚನಾ ಯಾತ್ರೆಯನ್ನ ಮಾಡ್ತಾ ಇದ್ದಾರೆ. ನಮ್ಮದು ಅಧರ್ಮಿಗಳ, ಅನ್ಯಾಯದ ವಿರುದ್ಧ ನ್ಯಾಯದ ಯುದ್ಧ, ಅಸತ್ಯದ ವಿರುದ್ಧ ನ್ಯಾಯ ಯುದ್ಧ ಮಾಡುತ್ತಿದ್ದೇವೆ ಎಂದರು.
ಸಿದ್ದರಾಮಯ್ಯ ನಾಯಕತ್ವ, ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬಂದಿರುವ ಸರ್ಕಾರವನ್ನ ತೆಗೆಯಲು ಜೆಡಿಎಸ್-ಬಿಜೆಪಿ ಹುನ್ನಾರ ನಡೆಸುತ್ತಿವೆ. ಬಡವರಿಗೆ ಗ್ಯಾರಂಟಿ ಕೊಟ್ಟು, ಬಡವರ ರಕ್ಷಣೆಗಾಗಿ ನಾವು ಹೋರಾಟ ಮಾಡ್ತಿದ್ದೇವೆ. ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಅಶೋಕ, ಮಿಸ್ಟರ್ ವಿಜಯೇಂದ್ರ ಹೀಗೆ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ರಿ. ಕುಮಾರಸ್ವಾಮಿ ನೀನು ಗೆದ್ದಿರೋದು 19 ಸೀಟು ಅಷ್ಟೇ. ನಿನಗೆ ಸಿದ್ದರಾಮಯ್ಯ ರಾಜೀನಾಮೆ ಬೇಕಾ. ಈ ಬಂಡೆ ಸಿದ್ದರಾಮಯ್ಯ ಜೊತೆ ಇದೆ. ಈ ಬಂಡೆ ಜೊತೆ 136 ಶಾಸಕರು ಇದ್ದಾರೆ. 1.80 ಕೋಟಿ ಮತದಾರರು ಸಿಎಂ ಸಿದ್ದರಾಮಯ್ಯ ಪರ ಇದ್ದಾರೆ. ನಿಮಗೆ ಏನೂ ಮಾಡೋಕೆ ಆಗೋದಿಲ್ಲ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ನಿಮಗೆ ಇತಿಹಾಸ ಗೊತ್ತಿದ್ಯ, ಈ ನಿಮ್ಮ ಪಾಪ ವಿಮೋಚನೆ ಯಾತ್ರೆ ಮಾಡಿ, ಶಕ್ತಿ ತುಂಬೋ ಕೆಲಸ ಮಾಡಿದ್ದಾರೆ ಅವರಿಗೆ ನಾನು ಧನ್ಯವಾದ ಹೇಳ್ತೀನಿ. ಕಾವೇರಿಗಾಗಿ ಎಸ್. ಎಂ ಕೃಷ್ಣ ಪಾದಯಾತ್ರೆ ಮಾಡಿದ್ರು, ಸ್ವಾತಂತ್ರ್ಯಕ್ಕಾಗಿ ದಂಡಿಯಾತ್ರೆ ಆಗಿತ್ತು. ಬೆಲೆ ಏರಿಕೆ ವಿರುದ್ಧ ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದರು. ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ನಾವು ಪಾದಯಾತ್ರೆ ಮಾಡಿದವು. ಕಾವೇರಿಗಾಗಿ ಮೇಕೆದಾಟು ಯಾತ್ರೆ ಮಾಡಿದವು. ಈ ನಾಡಿನ ನೀರು, ರೈತರಿಗಾಗಿ ಹೋರಾಟ ಮಾಡಿದವು. ನಿಮ್ಮ ಯಾತ್ರೆ ಯಾವುದಕ್ಕೆ? ಎಂದು ಡಿಕೆ ಶಿವಕುಮಾರ್ ಟೀಕಿಸಿದರು.