ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪೋಷಕರ ಪ್ರತಿಭಟನೆ
ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೋಟ್ಯಾಂತ ರೂ ವೆಚ್ಚದ ಸುಸಜ್ಜಿತ ಕಟ್ಟಡ ..ಇಲ್ಲಿ ೨೦೦ಕ್ಕೂ ಹೆಚ್ಚು ಮಕ್ಕಳ ಅವ್ಯವಸ್ಥೆಯ ಶಿಕ್ಷಣದ ವಾಸ್ತವ್ಯ…ಶಾಲೆಗೆ ನಿಗದಿತ ಸಮಯಕ್ಕೆ ಬಾರದ ಶಿಕ್ಷಕರು… ಗಬ್ಬೆದ್ದು ನಾರುವ ಕೊಠಡಿಗಳು ಶೌಚಾಲಯಗಳು…. ಹೆಣ್ಣು ಮಕ್ಕಳ ರಕ್ಷಣೆಗೆ ಮಹಿಳಾ ವಾರ್ಡನ್ ಇಲ್ಲ…ಮಕ್ಕಳನ್ನು ನೋಡಲು ಬರುವ ಪೋಷಕರಿಗೆ ಗೇಟ್ ಬಂದ್ …
ಇದು ಸಾಲಿಗ್ರಾಮ ತಾಲ್ಲೋಕಿನ ಸಕ್ಕರೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯೇ ಹೀಗೆ ಅವ್ಯವಸ್ಥೆಯಿಂದ ಕೂಡಿದ್ದು ಶಾಲೆಯಲ್ಲಿ ವಾಸಿಸುವ ಮಕ್ಕಳು ನಿತ್ಯ ಇಂತಹ ವಾತಾವರಣದಲ್ಲಿಯೇ ಕಾಲಕಳೆಯುವಂತಾಗಿದ್ದು ಶೌಚಾಲಯಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ.
ಇಲ್ಲಿ ವ್ಯಾಸಂಗ ಮಾಡುತ್ತಿರುವ ಗಂಡು ಮತ್ತು ಹೆಣ್ಣು ಮಕ್ಕಳ ಎರಡೂ ವಿಭಾಗದಲ್ಲಿಯೂ ಇಂತಹದೇ ವಾತಾವರಣದಲ್ಲಿ ಮಕ್ಕಳು ಕಲಿಯಬೇಕಾದ ಅನಿವಾರ್ಯತೆಯಲ್ಲಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಗಬ್ಬೆದ್ದು ನಾರುವ ಶೌಚಾಲಯ
ಮಕ್ಕಳ ಶೌಚಾಲಯ ವಿಭಾಗವಂತೂ ತೀರಾ ಹದಗೆಟ್ಟಿದ್ದು ಈ ಶಾಲೆ ಉದ್ಘಾಟನೆಯಾಗಿ ಕೇವಲ ೧ವರ್ಷ ಕಳೆದಿದ್ದು ಅಲ್ಲಿನ ಶೌಚಾಲಯಗಳನ್ನು ನೋಡಿದರೆ ಎಷ್ಟೋ ೧೦ ವರ್ಷವಾದಂತೆ ಕಾಣುತ್ತಿದ್ದು ಮಕ್ಕಳು ಬಳಸುವ ವಾಷ್ ಬೇಸಿನ್‌ಗಳು ಪಾಚಿಕಟ್ಟಿ ಕೆಂಪು ಬಣ್ಣಕ್ಕೆ ತಿರುಗಿದ್ದು ಯಾರೋ ಪಾನ್‌ಮಸಾಲ ಉಗಿದಂತೆ ಭಾಸವಾಗುತ್ತಿದ್ದು, ಅವುಗಳನ್ನು ತೊಳೆದು ಎಷ್ಟೋ ವರ್ಷವಾಗಿರಬೇಕು ಎನ್ನುವಂತಿವೆ ಹಾಗೂ ಶೌಚಾಲಯಗಳ ಕೊಠಡಿಗಳ ಟೈಲ್ಸ್ಗಳ ಮೇಲೆ ಮಣ್ಣು ಹಾಗೆಯೇ ಇದ್ದು ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಕಣ್ಣಿದ್ದು ಕುರುಡಾದಂತಾಗಿದೆ.
ಅಶುಚಿತ್ವದ ಮಲಗುವ ಕೋಣೆ
ಮಕ್ಕಳು ಮಲಗುವ ಕೋಣೆಯಲ್ಲಿ ಯಾವುದೇ ಹಾಸಿಗೆಯಿಲ್ಲದೇ ಚಾಪೆಯಲ್ಲಿಯೇ ಮಲಗಬೇಕಿದ್ದು ಅದೂ ಕೂಡಾ ವಸತಿ ಶಾಲೆಯಿಂದ ವಿತರಣೆಯಾಗದೇ ಮಕ್ಕಳೇ ಮನೆಯಿಂದ ತರಬೇಕಿದ್ದು ಯಾವುದೇ ಮಂಚ(ಬಂಕರ್ ಕಾಟ್) ದ ವ್ಯವಸ್ಥೆ ಇಲ್ಲಿನ ಮಕ್ಕಳಿಗೆ ಕನಸಾಗಿದ್ದು ಋತುಮತಿಯಾದ ಮಕ್ಕಳ ಗೋಳು ಇಲ್ಲಿ ಕೇಳುವವರೇ ಇಲ್ಲದಂತಾಗಿದ್ದು ಆ ಮಕ್ಕಳು ಕೂಡಾ ನೆಲದಲ್ಲಿಯೇ ಮಲಗಬೇಕಿರುವುದು ಆತಂಕದ ಸಂಗತಿಯಾಗಿದ್ದು ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕಂಡೂ ಕಾಣದಂತಿರುವುದು ದುರದೃಷ್ಟಕರ.
ಕಟ್ಟಡದ ಹಿಂಭಾಗದಲ್ಲಿ ಯಾವುದೇ ಸ್ವಚ್ಚತೆ ಇಲ್ಲವಾಗಿದ್ದು ಇಲ್ಲಿ ಸ್ವಚ್ಚ ಮಾಡಲೂ ಯಾರೂ ಇಲ್ಲವೆನೋ ಎಂಬ ಸ್ಥಿತಿ ಇದ್ದು ವಸತಿ ಶಾಲೆಗಳ ಹಿಂಭಾಗ ಕಸದ ರಾಶಿಯೇ ಇದ್ದರೂ ಅದನ್ನು ಸ್ವಚ್ಚಗೊಳಿಸುವ ಬದಲು ಅಲ್ಲಿಯೇ ಸುಟ್ಟಹಾಕುತ್ತಿದ್ದು, ಪತ್ರಕರ್ತರು ಭೇಟಿ ನೀಡಿದ ಸಂಧರ್ಭದಲ್ಲಿ ಮಕ್ಕಳ ಕೋಣೆಗಳನ್ನು ಸ್ವಚ್ಚಗೊಳಿಸಿ ಶೌಚಾಲಯಗಳಿಗೆ ಪೆನಾಯಿಲ್ ಹಾಕುವ ಕೆಲಸವಾಗಿದ್ದು ಇಲ್ಲಿನ ಕೆಲಸಗಾರರ ಸೂಕ್ಷತೆಗೆ ಸಾಕ್ಷಿಯಾಯಿತು.
ಹುಳು ತುಂಬಿದ ಅಕ್ಕಿ
ಇದೇ ವೇಳೆ ಅಡುಗೆ ಕೋಣೆಯ ದಾಸ್ತಾನು ಕೊಠಡಿಯಲ್ಲಿ ಅಕ್ಕಿ ಚೀಲ ತೆರೆದು ನೋಡಿದರೆ ಜಿರಳೆಗಳು ಕಂಡುಬoದಿದ್ದು ಈ ಬಗ್ಗೆ ಶಾಲೆಯ ವಾರ್ಡನ್ ಅವರು ಅದು ಸ್ವಚ್ಚಗೊಳಿಸಿ ಇಟ್ಟಿರುವ ನುಚ್ಚು ಅಕ್ಕಿ ಎಂದು ಸಮಜಾಯಿಸಿ ನೀಡಿದ್ದು ಪೋಷಕರು ಮಾತ್ರ ಯಾವುದೇ ಸ್ವಚ್ಚತೆ ಮಾಡದೇ ಅದೇ ಅಕ್ಕಿಯನ್ನು ಊಟಕ್ಕೆ ನೀಡುತ್ತಾರೆ ಎಂದು ಆರೋಪ ಕೇಳಿ ಬರುತ್ತಿದೆ.

ಹೆಣ್ಣು ಮಕ್ಕಳಿಗೆ ವಾರ್ಡನ್ ಇಲ್ಲ
ಯಾವುದೇ ವಸತಿ ಶಾಲೆಗಳಲ್ಲಿ ಹೆಣ್ಣು ಮಕ್ಕಳನ್ನು ದಾಖಲು ಮಾಡಿಕೊಂಡಲ್ಲಿ ಮಹಿಳಾ ವಾರ್ಡನ್ ಇರಲೇಬೇಕೆಂಬ ಬಾಲನ್ಯಾಯ ಕಾಯ್ದೆಯ ನಿಯಮ ಇದ್ದರೂ ಇಲ್ಲಿ ಮಹಿಳಾ ವಾರ್ಡನ್ ಇಲ್ಲದೇ ಮಕ್ಕಳನ್ನು ನೋಡಿಕೊಳ್ಳಲಾಗುತ್ತಿದ್ದು ಈ ಬಗ್ಗೆ ಪತ್ರಿಕೆ ಪ್ರಶ್ನಿಸಿದರೆ ಶಾಲೆಯ ಶಿಕ್ಷಕಿಯೊಬ್ಬರು ನೋಡಿಕೊಳ್ಳುತ್ತಾರೆ ಎಂಬ ಉತ್ತರ ಬಂದಿದ್ದು ಇನ್ನು ಇಲ್ಲಿ ಮಕ್ಕಳನ್ನು ನೋಡಲು ಬರುವ ಪೋಷಕರನ್ನು ಶಾಲೆಯ ಒಳಗಡೆ ಬಿಡದೇ ಗೇಟ್ ಹೊರಗೆ ನಿಲ್ಲಿಸಲಾಗುತ್ತಿದ್ದು ದೂರದಿಂದಲೇ ತಮ್ಮ ಮಕ್ಕಳ ದರ್ಶನ ಪಡೆದು ಹೋಗ ಬೇಕಿದೆ.
” ಶಿಕ್ಷಕರೇ ಇಲ್ಲದ ವಸತಿ ಶಾಲೆ “
ನೂರಾರು ಮಕ್ಕಳಿಗೆ ಶಿಕ್ಷಣ ಕೊಡಬೇಕಾದ ಶಾಲೆಯಲ್ಲಿ 9 ಮಂದಿ ಇರಬೇಕಾದ ಶಿಕ್ಷಕರಲ್ಲಿ ಕೇವಲ 4 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಹೊರಗುತ್ತಿಗೆ ಶಿಕ್ಷಕರನ್ನು ನೇಮಿಸಿಕೊಂಡು ಇಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಲಾಗುತ್ತಿರುವುದು ನಿಜಕ್ಕು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಕನ್ನಡಿಯಾಗಿದೆ
“ದಿನದಿಂದ ದಿನಕ್ಕೆ ಕುಖ್ಯಾತಿ ಪಡೆಯುತ್ತಿರುವ ನಿಲಯ “
ಈ ವಸತಿ ನಿಲಯ ಉದ್ಘಾಟನೆ ಗೊಂಡ ಬಳಿಕ ನೂರಾರು ಮಕ್ಕಳು ಉತ್ತಮ ಶಿಕ್ಷಣ ದೊರೆಯುತ್ತದೆ ಎಂದು ಕನಸು ಕಂಡಿದ್ದರು ಈ ನಿಲಯದಲ್ಲಿ ಕೆಲ ದಿನಗಳ ಹಿಂದೆ ಮಕ್ಕಳ ಕೈಯಲ್ಲಿ ಶೌಚವನ್ನು ಸ್ವಚ್ಚಮಾಡಿಸಿ ಕುಖ್ಯಾತಿ ಒಳಗಾಗುತ್ತಿದ್ದು ನಿತ್ಯ ಇಲ್ಲಿ ಒಂದಲ್ಲ ಒಂದು ಸಮಸ್ಯೆಯ ಕಿರಿಕ್ ಅಗುತ್ತಿದ್ದು ಈ ಸಮಸ್ಯೆ ಮುಕ್ತಿ ಸಿಗ ಬೇಕಾದರೇ ಇಲ್ಲಿನ ಪ್ರಾಂಶುಪಾಲರನ್ನು ಬೇರೆಡೆ ವರ್ಗಾಯಿಸ ಬೇಕು ಎಂಬುದು ಪೋಷಕರ ಒತ್ತಾಯವಾಗಿದೆ
” ದಿಢೀರ್ ಪ್ರತಿಭಟನೆ ಮಾಡಿದ ಪೋಷಕರು”
ಸೋಮವಾರ ಇಷ್ಟೆಲ್ಲಾ ಅವ್ಯವಸ್ಥೆಯ ಬಗ್ಗೆ ಶಾಲೆಯ ಆವರಣದಲ್ಲಿ ಪೋಷಕರು ಜಮಾಯಿಸಿ ಪ್ರತಿಭಟನೆ ಮಾಡಿ ಈ ಅವ್ಯವಸ್ಥೆ ಸರಿ ಪಡಿಸಲು ಆಗ್ರಹಪಡಿಸಿದರಲ್ಲದೇ ಮಕ್ಕಳಿಗೆ ಇಲ್ಲಿ ಸೂಕ್ತ ರಕ್ಷಣೆ ಇಲ್ಲದಂತೆ ಆಗಿದ್ದು ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸುವಂತೆ ಆಗ್ರಹಿಸಿದರು.
