ಮೈಸೂರು: ಲೋಕಸಭಾ ಚುನಾವಣೆಯಲ್ಲಿನ ಈ ಗೆಲುವು ನನ್ನ ವೃತ್ತಿ ಜೀವನದ ಸಂಕ್ರಮಣ ಕಾಲ ಎಂದು ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಜಯದೇವ ಆಸ್ಪತ್ರೆ ಅವರ ಆಪ್ತಬಳಗದಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದು ಸಂತೋಷವನ್ನುಂಟು ಮಾಡಿದೆ. ಕ್ಷೇತ್ರದಲ್ಲಿ ಬಿಜೆಪಿ – ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ಗೆಲುವು ಲಭಿಸಿದೆ. ಈ ಗೆಲುವನ್ನು ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅರ್ಪಿಸುತ್ತೇನೆ ಎಂದರು. ನಾನು ವೈದ್ಯಕೀಯ ಕ್ಷೇತ್ರದಲ್ಲಿ ಇದ್ದು, ಈಗ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೆನೆ. ಎರಡೂ ಕೂಡ ಸೇವಾ ಕ್ಷೇತ್ರವೆ ಎಂದರು.
ಇದೊಂದು ಜವಾಬ್ದಾರಿಯನ್ನು ಜನರ ಸೇವೆಗೆ ಬಳಸಿಕೊಳ್ಳುತ್ತೇನೆ. ಪಕ್ಷದ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ, ಕಾರ್ಯಕರ್ತರು ನಿರಂತರ ನೆರವು ನೀಡಿದ್ದಾರೆ ಹಾಗೂ ಪ್ರಜ್ಞಾವಂತ ಮತದಾರರಿಗೆ ಹೃದಯ ಸ್ಪರ್ಶಿ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ತಿಳಿಸಿದರು. ಸಚಿವ ಸ್ಥಾನದ ಕುರಿತು ಮಾತನಾಡಿಲ್ಲ. ಮೊದಲು ಸರ್ಕಾರ ರಚನೆ ಆಗಬೇಕು. ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪಟ್ಟಿಮಾಡಿ ಸುಧಾರಣೆಗೆ ಕ್ರಮವಹಿಸುತ್ತೇನೆ. ಪ್ರಮುಖವಾಗಿ ಕೃಷಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮುಂತಾದ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ ಅಭಿನಂದಿಸಿದರು. ಡಾ. ಅನುಸೂಯ ಮಂಜುನಾಥ್, ಡಾ. ಶ್ವೇತಾ ಸದಾನಂದ್, ಡಾ. ದೇವರಾಜ್, ಹರೀಶ್‌ಕುಮಾರ್ ಇದ್ದರು.